ADVERTISEMENT

ಕೊಳವೆಬಾವಿ ಪಕ್ಕ ಇಂಗುಗುಂಡಿ ನಿರ್ಮಾಣ ಅಗತ್ಯ

ಅಂತರ್ಜಲ ಮರುಪೂರಣ ಘಟಕ ನಿರ್ಮಾಣ, ಜಲಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:18 IST
Last Updated 7 ಮಾರ್ಚ್ 2017, 7:18 IST
ಚನ್ನರಾಯಪಟ್ಟಣ: ಕೊಳವೆಬಾವಿ ಪಕ್ಕದಲ್ಲಿ ಇಂಗುಗುಂಡಿ ನಿರ್ಮಾಣ ಮಾಡುವುದರಿಂದ ಅಂತರ್ಜಲವೃದ್ಧಿಯಾಗುತ್ತದೆ ಎಂದು ಭೂಗರ್ಭಶಾಸ್ತ್ರಜ್ಞ ಎನ್‌.ಜೆ.ದೇವರಾಜರೆಡ್ಡಿ ಹೇಳಿದರು.
 
ಪಟ್ಟಣದಲ್ಲಿ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಂತರ್ಜಲ ಮರುಪೂರಣ ಘಟಕ ನಿರ್ಮಾಣ, ಜಲಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಇಂಗುಗುಂಡಿಗೆ ನೀರು ಹರಿದು ಬರುವಂತೆ ಕಾಲುವೆ ನಿರ್ಮಿಸಬೇಕು. ಮಳೆನೀರು ಸಂಗ್ರಹ ಪದ್ಧತಿಯನ್ನು ಮನೆಗಳಲ್ಲಿ ಅಳವಡಿಸಿಕೊಳ್ಳಬೇಕು. ಮಳೆ ನೀರನ್ನು ಫಿಲ್ಟರ್‌ ಮಾಡುವುದರಿಂದ ಶುದ್ಧ ಕುಡಿಯುವ ನೀರು ಪಡೆಯಬಹುದು ಎಂದು ಅವರು ಹೇಳಿದರು.
 
ಅಂಕಿ–ಅಂಶಗಳ ಪ್ರಕಾರ 1970ರಲ್ಲಿ ದೇಶದಲ್ಲಿ 30 ಸಾವಿರ ಕೊಳವೆಬಾವಿಗಳಿದ್ದವು. 2015ರಲ್ಲಿ 4 ಕೋಟಿ ಕೊಳವೆಬಾವಿಗಳಿವೆ. ಇವುಗಳಲ್ಲಿ 50 ಲಕ್ಷ ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಕರ್ನಾಟಕದಲ್ಲಿ 9.9 ಲಕ್ಷ ಕೊಳವೆ ಬಾವಿಗಳಿವೆ. ಪ್ರಪಂಚದಲ್ಲಿ ಎರಡನೇ ಜಲಸಂಪತ್ತು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. 113 ನದಿಗಳು, 13 ಲಕ್ಷ ಕೆರೆ, ಕಟ್ಟೆಗಳಿವೆ ಎಂದು ಹೇಳಿದರು. ನದಿ ಮೂಲವನ್ನು ಕಲುಷಿತಗೊಳಿಸಬಾರದು. ನೀರಿನ ಮೂಲ ಸಂರಕ್ಷಿಸಿದರೆ ಭವಿಷ್ಯದ ಜನಾಂಗಕ್ಕೆ ಅನುಕೂಲ ಎಂದ ಅವರು, ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
 
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಅಂತರ್ಜಲ ಕುಸಿದರೆ ಅನೇಕ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಮನುಕುಲಕ್ಕೆ ಪ್ರಕೃತಿ ಒಳಿತನ್ನು ಬಯಸುತ್ತದೆ. ಅದಕ್ಕೆ ಪ್ರತಿಯಾಗಿ ಮನುಷ್ಯ ಏನನ್ನು ನೀಡುತ್ತಿಲ್ಲ ಎಂದು ಹೇಳಿದರು. ಅವರು, ತಾಲ್ಲೂಕಿನಲ್ಲಿರುವ ಕೊಳವೆಬಾವಿಗಳನ್ನು ಮರು ಪೂರಣಗೊಳಿಸಿದರೆ ಅಂತರ್ಜಲ ಹೆಚ್ಚಾಗುತ್ತದೆ ಎಂದರು. ವಿಧಾನಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕಾಡಿನ ಸಂಪತ್ತು ಹೆಚ್ಚಾದಷ್ಟೂ ಮಳೆಯ ಪ್ರಮಾಣ ಸಹ ಹೆಚ್ಚುತ್ತದೆ. ಅಂತರ್ಜಲ ಹೆಚ್ಚು ಮಾಡಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದರು. 
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಪುರಸಭಾ ಅಧ್ಯಕ್ಷ ಕೆ.ಜೆ.ಸುರೇಶ್‌, ಎಪಿಎಂಸಿ ಅಧ್ಯಕ್ಷ ವಿ.ಎನ್‌.ಮಂಜುನಾಥ್‌, ಉಪಾಧ್ಯಕ್ಷ ಎಚ್‌.ಎನ್‌.ಅಮಾಸೇಗೌಡ, ನಿರ್ದೇಶಕರಾದ ಬಿ.ಎಚ್‌.ಶಿವಣ್ಣ, ಎಂ.ಬಿ.ತಿಮ್ಮೇಗೌಡ, ಎಂ. ಶಂಕರ್‌, ಕಾರ್ಯದರ್ಶಿ ಸಿ.ಎಲ್‌.ಸಿದ್ಧರಂಗಸ್ವಾಮಿ ಇದ್ದರು. ನಿರ್ದೇಶಕ ಎಂ.ಆರ್.ಅನಿಲ್‌ಕುಮಾರ್‌ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.