ADVERTISEMENT

ಖಾತರಿ ನೆಪದಲ್ಲಿ ಸಾಲ ನಿರಾಕರಣೆ ಬೇಡ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 8:22 IST
Last Updated 27 ಆಗಸ್ಟ್ 2016, 8:22 IST

ಹಾಸನ: ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಮಾನ್ಯ ಜನರ ಆರ್ಥಿಕ ಸಂಕಷ್ಟಕ್ಕೆ ಪೂರಕವಾಗಿ ಸ್ಪಂದಿಸಬೇಕು. ಭದ್ರತೆ ನೆಪದಲ್ಲಿ ಅವರನ್ನು ಅವಕಾಶ ವಂಚಿತರನ್ನಾಗಿಸಬಾರದು ಎಂದು ಸಂಸದ ಎಚ್.ಡಿ.ದೇವೇಗೌಡ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಶುಕ್ರವಾರ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎಚ್.ಡಿ. ರೇವಣ್ಣ, ಎಚ್.ಎಸ್.ಪ್ರಕಾಶ್, ಸಿ.ಎನ್.ಬಾಲಕೃಷ್ಣ ಅವರು ಬ್ಯಾಂಕ್‌ನಲ್ಲಿ ಸಾಲ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಸಂದರ್ಭ ಸಂಸದರು ಈ ನಿರ್ದೇಶನ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ  ವಿಷಯ ಪ್ರಸ್ತಾಪಿಸಿ, ಕೆಲವು ಬ್ಯಾಂಕ್ ಶಾಖೆಗಳಲ್ಲಿ ಸಾಲ ಮಂಜೂರಾತಿಗಾಗಿ ಕಮಿಷನ್‌ ಪಡೆಯಲಾಗುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದರು.

ಇದಕ್ಕೆ ದನಿಗೂಡಿಸಿದ ಶಾಸಕರು, ವಿವಿಧ ರೀತಿಯ ಸಾಲ ಮಂಜೂರಾತಿ ವೇಳೆ ಆಗುತ್ತಿರುವ ವಿಳಂಬ, ಬ್ಯಾಂಕ್ ಗ್ಯಾರಂಟಿ ಹೆಸರಿನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಸಭೆಯ ಗಮನಕ್ಕೆ ತಂದರು.

ದೇವೇಗೌಡರು ಮಾತನಾಡಿ, ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತದೆ. ಅದಕ್ಕೆ ಬ್ಯಾಂಕ್‌ಗಳ ಪೂರಕ ನೆರವು ಬೇಕು. ಹಲವು ರೀತಿಯ ಸಾಲಗಳಿಗೆ ಮೂರನೇ ವ್ಯಕ್ತಿಯ ಭದ್ರತೆ ಅಗತ್ಯವಿರುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕರನ್ನು ಅಲೆಸಬೇಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಇದಕ್ಕೂ ಮುನ್ನ ರೇವಣ್ಣ ಅವರು 2015–16ನೇ ಸಾಲಿಗೆ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಲ್ಲಿ 360 ಅರ್ಜಿ ಪೈಕಿ 180 ಮಂದಿ ಆಯ್ಕೆ ಮಾಡಿ ಅದರಲ್ಲಿ 50 ಅಭ್ಯರ್ಥಿಗಳಿಗೆ ಸಾಲ ಮಂಜೂರಾತಿ ಮಾಡುವಂತೆ ಬ್ಯಾಂಕ್‌ಗಳಿಗೆ ಕಳುಹಿಸಿದ್ದರೂ ಕೇವಲ 24 ಮಂದಿ ಸಾಲ ಪಡೆದಿದ್ದಾರೆ. ಹೀಗ ಮುಂದುವರಿದಲ್ಲಿ ನಿರುದ್ಯೋಗಿಗಳಿಗೆ ಸ್ವಾವಲಂಬಿ ಬದುಕು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಾಲ ಮಂಜೂರಾತಿಗೆ ಬ್ಯಾಂಕ್‌ಗಳಿಗೆ ಕಳುಹಿಸಿದ ವೇಳೆ ಅದು ಅನುಷ್ಟಾನಗೊಳ್ಳುವಂತೆ ಕೈಗಾರಿಕಾ ಇಲಾಖೆ ಹಾಗೂ ಲೀಡ್ ಬ್ಯಾಂಕ್‌ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರು ಎಂದು ಜಿಲ್ಲಾಧಿಕಾರಿ ವಿ.ಎನ್‌.ಚೈತ್ರಾ  ಎಚ್ಚರಿಸಿದರು.

ಸಭೆಯಲ್ಲಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಮಳೆಯ ಪ್ರಮಾಣದ ಅಳತೆ ಮಾನದಂಡ ಸರಿ ಇಲ್ಲ. ಯಾವುದೋ ತಿಂಗಳಿನಲ್ಲಿ ಸುರಿದ ಮಳೆಯನ್ನು ವಾರ್ಷಿಕ ಸರಾಸರಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಆದರೆ ಬಿತ್ತನೆ ಹಾಗೂ ಆನಂತರದ ಅವಧಿಯಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ರೈತರಿಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕು ಎಂದು ಶಿವಲಿಂಗೇಗೌಡ ಸಲಹೆ ನೀಡಿದರು.

ಗ್ರಾಮೀಣ ಭಾಗದ ಬಡಜನರ ಮನೆಗೆ ಅಥವಾ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಅಥವಾ ಸ್ಥಳಾಂತರದ ಸಂದರ್ಭ ಹೆಚ್ಚು ಅಲೆಸದೆ ಮಾನವೀಯತೆಯಿಂದ ಜನಸಾಮಾನ್ಯರ ಸೇವೆ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಗೌಡರು ಸೂಚಿಸಿದರು.

ಚನ್ನರಾಯಪಟ್ಟಣ ತಾಲ್ಲ್ಲೂಕಿನ ಕೆಂಪಿನಕೋಟೆ ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಸುವ ಬಗ್ಗೆ ಗ್ರಾಮಸ್ಥರ ದೂರು ನೀಡಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು,  ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು  ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಶ್ರೀನಿವಾಸ್ ಅವರಿಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಶ್ರೀನಿವಾಸ್,  ಕೆಂಪಿನ ಕೋಟೆ ಸುತ್ತಮುತ್ತ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿರುವುದು ನಿಜ. ಆ.18ರಂದು  ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ಭಾಗದ 40 ಎಕರೆ ಪ್ರದೇಶದಲ್ಲಿ ಚಿನ್ನದ ಲಭ್ಯತೆ ಸಾಧ್ಯವಿದೆ ಎಂದು ಅಭಿಪ್ರಾಯಪಡಲಾಗಿದೆ. ಗಣಿಗಾರಿಕೆ ಕುರಿತು ಈಗಲೇ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.