ADVERTISEMENT

ಜಿಲ್ಲೆಯಲ್ಲಿ ಶೇ 30ರಷ್ಟು ಮಳೆ ಕಡಿಮೆ

ತಾಂತ್ರಿಕ ಆವಿಷ್ಕಾರ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:44 IST
Last Updated 6 ಫೆಬ್ರುವರಿ 2017, 5:44 IST

ಹಾಸನ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ನಿಗದಿಗಿಂತ  ಶೇ. 30 ರಷ್ಟು ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ರಾಮಚಂದ್ರಯ್ಯ ತಿಳಿಸಿದರು.

ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ  ರೈತರಿಂದ ರೈತರಿಗಾಗಿ ತಾಂತ್ರಿಕ ಆವಿಷ್ಕಾರಗಳ ಪರಿಚಯ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹವಾಮಾನ ಆಧಾರಿತ ಬೆಳೆ ಬೆಳೆದು ಇಳುವರಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ  ನಿರಂತರ ವಿಜ್ಞಾನಿಗಳ ಜತೆಗೆ ಸಂಪರ್ಕ ಹೊಂದಿ ಬೇಸಾಯ ಕ್ರಮ ಅಳವಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ರಾಜೇಗೌಡ ಅವರು, ಕೇಂದ್ರ ಪ್ರಾರಂಭವಾದಗಿನಿಂದ ಇಲ್ಲಿಯವರೆಗೂ ಕೈಗೊಂಡ ಕ್ಷೇತ್ರ ಪ್ರಯೋಗ, ಮುಂಚೂಣಿ ಪ್ರಾತ್ಯಕ್ಷಿಕೆ, ವಿವಿಧ ತರಬೇತಿಗಳು ಹಾಗೂ ಕೇಂದ್ರದ ವಿಸ್ತರಣಾ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

ಜಿ.ಪಂ ಸದಸ್ಯ ಶಿವಣ್ಣ  ಮಾತನಾಡಿ, ರೈತರು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ನೀರಿನ ಸದ್ಬಳಕೆ ಕುರಿತು ವಿಚಾರಗಳನ್ನು
ಅರಿತು ತಮ್ಮ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಶ್ರೀನಿವಾಸ್‌, ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಪ್ರಗತಿಪರ ರೈತರು ಇತರರಿಗೆ ತಾಂತ್ರಿಕ ಆವಿಷ್ಕಾರ ತಿಳಿಸಿಕೊಡಬೇಕು ಎಂದು ಹೇಳಿದರು.

ಕ್ಷೇತ್ರ ಭೇಟಿ ಆಯೋಜಿಸಿರುವುದರಿಂದ ‘ನೋಡಿ ಕಲಿ ಮಾಡಿ ತಿಳಿ’ ಎಂಬಂತೆ ರೈತರು ವಿಷಯಗಳನ್ನು ಹೆಚ್ಚಿನ ಮಟ್ಟದಲ್ಲಿ ಮನವರಿಕೆ ಮಾಡಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಭಾಗ್ಯಾ ನಾಗರಾಜ್‌, ಕೇಂದ್ರದ ವಿಜ್ಞಾನಿಗಳಾದ ಎಂ.ಶಿವಶಂಕರ್, ಡಾ.ಕೆ.ಜೆ.ಕಾಂತರಾಜ, ಡಾ.ಎಚ್.ಕೆ.ಪಂಕಜಾ, ಡಾ.ಎ.ಸಿ. ಗಿರೀಶ್ ಹಾಜರಿದ್ದರು. ವಿವಿಧ ತಾಲ್ಲೂಕಿನ 30 ರೈತರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.