ADVERTISEMENT

ತಾತ್ಕಾಲಿಕ ಚೆಕ್‌ಪೋಸ್ಟ್ ದಿಢೀರ್ ತೆರವು

ರಾಷ್ಟ್ರೀಯ ಹೆದ್ದಾರಿಯಿಂದ ಕಾರೇಹಳ್ಳಿ ಗ್ರಾಮಕ್ಕೆ ವರ್ಗ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 7:17 IST
Last Updated 12 ಫೆಬ್ರುವರಿ 2016, 7:17 IST

ಹಿರೀಸಾವೆ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಅಕ್ರಮಗಳನ್ನು ತಡೆಗಟ್ಟುವ ಕಾರಣ  ಪಟ್ಟಣದ ಮೇಟಿಕೆರೆ ವೃತ್ತದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಚೆಕಪೋಸ್ಟ್‌ ಅನ್ನು ಗುರುವಾರ ಅಧಿಕಾರಿಗಳು ದಿಢೀರನೆ ತೆರವುಗೊಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರು ಕಡೆಯಿಂದ ಹಾಸನ ಜಿಲ್ಲೆಗೆ ಪ್ರವೇಶ ಮಾಡುವ ವಾಹನಗಳನ್ನು ತಪಾಸಣೆ ಮಾಡಲು, ಚುನಾವಣಾ ಮಾದರಿ ನೀತಿ ಸಂಹಿತೆ ಚೆಕ್‌ಪೋಸ್ಟ್‌ನ್ನು ಕಳೆದ ಶನಿವಾರ ಜಿಲ್ಲಾ ಚುನಾವಣಾಧಿಕಾರಿಗಳು ನಿರ್ದೇಶನದ ಮೆರೆಗೆ ಪ್ರಾರಂಭಿಸಲಾಗಿತ್ತು.

ತಾಲ್ಲೂಕಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಈ ಕೇಂದ್ರದಲ್ಲಿ ವಾಹನಗಳನ್ನು ತಪಾಸಣೆ ನಡೆಸಲು ನಿಯೋಜಿಸಲಾಗಿತ್ತು. ಈ ತಪಾಸಣಾ ಕೇಂದ್ರವು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವುದರಿಂದ ಅತಿ ವೇಗವಾಗಿ ಬರುವ ವಾಹನಗಳನ್ನು ಪರಿಶೀಲನೆ ಮಾಡುವುದು ಸಿಬ್ಬಂದಿಗೆ ಕಷ್ಟದ ಕೆಲಸವಾಗಿತ್ತು. 

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬುಧವಾರ ನಡೆದ ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಈ ಚೆಕ್‌ ಪೋಸ್ಟ್‌ನ್ನು  ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಿದ್ದರು ಎಂದು ತಿಳಿದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಪಾಸಣಾ ಕೇಂದ್ರವನ್ನು ತೆರವುಗೊಳಿಸಿ, ತಾಲ್ಲೂಕಿನ ಕಾರೇಹಳ್ಳಿ ಮತ್ತು ದಿಡಗ ಗ್ರಾಮಗಳ ಬಳಿ ಚೆಕ್‌ಪೋಸ್ಟ್‌ಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ತುಮಕೂರು ಜಿಲ್ಲೆ ಕಡೆಯಿಂದ ಹಾಸನ ಜಿಲ್ಲೆಗೆ ಪ್ರವೇಶ ಮಾಡುವ ವಾಹನಗಳನ್ನು ಇಂದಿನಿಂದ ಚೆಕ್‌ ಮಾಡಲಾಗುವುದು ಎಂದು ತಹಶೀಲ್ದಾರ್ ಕೆ. ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಮೂಲಕ ಮೂರೇ ದಿನದಲ್ಲಿ ಚೆಕ್‌ಪೋಸ್ಟ್‌ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.