ADVERTISEMENT

ತೆಂಗಿನ ನಾರು ಉತ್ಪಾದನಾ ಘಟಕಕ್ಕೆ ಬೆಂಕಿ

ಸುಮಾರು ₨ 75 ಲಕ್ಷ ನಷ್ಟ; ಬೆಂಕಿ ನಂದಿಸಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 11:15 IST
Last Updated 27 ಜನವರಿ 2015, 11:15 IST

ಹಿರೀಸಾವೆ: ಇಲ್ಲಿಗೆ ಸಮೀಪದ ಮಟ್ಟನವಿಲೆಯಲ್ಲಿರುವ ತೆಂಗಿನ ನಾರು ಉತ್ಪಾದನಾ ಘಟಕಕ್ಕೆ ಸೋಮವಾರ ಬೆಂಕಿ ತಗುಲಿ ಸುಮಾರು ₨ 75 ಲಕ್ಷ ನಷ್ಟ ಸಂಭವಿಸಿದೆ.

ಮಟ್ಟನವಿಲೆ–ದೊಡೇರಿ ಗ್ರಾಮದ ರಸ್ತೆಯಲ್ಲಿರುವ ಎಸ್‌ಎ ತೆಂಗಿನ ನಾರು ಉತ್ಪಾದನಾ ಘಟಕದಲ್ಲಿ ಸೋಮವಾರ ಮಧ್ಯಾಹ್ನ ತೆಂಗಿನ ನಾರಿಗೆ ಬೆಂಕಿ ತಗುಲಿದೆ. ಘಟಕದ ಕಾರ್ಮಿಕರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದಲ್ಲೇ ಮೂರು ಎಕರೆ ಜಾಗದಲ್ಲಿದ್ದ ನಾರು ಮತ್ತು ತೆಂಗಿನ ಮೊಟ್ಟೆಗೆ ಬೆಂಕಿ ಆವರಿಸಿತು. ನಂತರ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು.

ಬಳಿಕ ಸ್ಥಳಕ್ಕೆ ಬಂದ ಚನ್ನರಾಯಪಟ್ಟಣ ಅಗ್ನಿಶಾಮಕ ದಳದ ಎರಡು ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿದವು. ಆದರೆ, ಬೆಂಕಿ ತಹಂಬದಿಗೆ ಬಾರದೆ ಹಾಸನ ಮತ್ತು ಕೆ.ಆರ್. ಪೇಟೆಯಿಂದ ಮತ್ತೆರೆಡು ವಾಹನ ಕರೆಸಲಾಯಿತು. ಸಂಜೆ ಆದರೂ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕದಳದ ಜಿಲ್ಲಾಮಟ್ಟದ ಅಧಿಕಾರಿ ರುದ್ರೇಗೌಡ ನೇತೃತ್ವದಲ್ಲಿ 24 ಮಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

ಮಟ್ಟನವಿಲೆ ಗ್ರಾಮದ ನಾಗರಾಜು, ಸ್ವಾಮಿ ಎಂಬುವವರ ಜಮೀನಿನಲ್ಲಿ ತಮಿಳುನಾಡು ಮೂಲದ ಮಣಿಯಣ್ಣ ಎಂಬುವವರು ಆರು ತಿಂಗಳ ಹಿಂದೆ ಈ ತೆಂಗಿನನಾರು ಘಟಕ ಸ್ಥಾಪಿಸಿದ್ದರು. ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿತು ಎಂದು ತೆಂಗಿನ ನಾರು ಘಟಕದ ಮಾಲೀಕರು ತಿಳಿಸಿದ್ದಾರೆ.

‘ವಿದ್ಯುತ್‌ ಅವಘಡದಿಂದ ಬೆಂಕಿ ತಗುಲಲಿಲ್ಲ. ಕಬ್ಬಿಣದ ಸಲಾಕೆ ಕತ್ತರಿಸುವ ಯಂತ್ರದ ಕಿಡಿ ತೆಂಗಿನ ನಾರಿನ ಮೇಲೆ ಹಾರಿ ಬೆಂಕಿ ಹೊತ್ತಿಕೊಂಡಿತು’ ಎಂದು ‘ಸೆಸ್ಕ್’ ಹಿರೀಸಾವೆ ಶಾಖಾಧಿಕಾರಿ ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಮಿಕರು ಅಪಾಯದಿಂದ ಪಾರಾಗಿ­ದ್ದಾರೆ. ಘಟಕದ ಯಾವುದೇ ಯಂತ್ರಗಳಿಗೂ ಹಾನಿಯಾಗಿಲ್ಲ. ಮಂಗಳವಾರದೊಳಗೆ ಬೆಂಕಿ ನಂದಿಸಲಾಗು­ವುದು’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.