ADVERTISEMENT

ತೆರವಾಗದ ಮರಗಳು; ರಸ್ತೆ ವಿಸ್ತರಣೆ ವಿಳಂಬ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 10:09 IST
Last Updated 17 ನವೆಂಬರ್ 2017, 10:09 IST

ಶ್ರವಣಬೆಳಗೊಳ: ಬಾಹುಬಲಿ ಮಹಾಮಜ್ಜನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದರೂ ಮರಗಳ ತೆರವು ಕಾರ್ಯಾಚರಣೆ ಇನ್ನೂ ನಡೆಯದೆ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದೆ. ಶ್ರವಣಬೆಳಗೊಳ ಸಂಪರ್ಕಿಸುವ ಎಂಟು ಮಾರ್ಗಗಳ ರಸ್ತೆಗಳನ್ನು ರಾಜ್ಯ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಪಡಿಸಲಿವೆ. ರಸ್ತೆಯ ಎರಡೂ ಬದಿಯಲ್ಲಿರುವ 636 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ.

ಕೇಂದ್ರದ ರಸ್ತೆ ನಿಧಿಯಿಂದ ₹ 40 ಕೋಟಿ ಮಂಜೂರಾಗಿದೆ. ಮೊದಲ ಹಂತದಲ್ಲಿ ಚನ್ನರಾಯಪಟ್ಟಣ ಹೆದ್ದಾರಿಯಿಂದ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆವರೆಗೆ 16 ಕಿ.ಮೀ ರಸ್ತೆ ವಿಸ್ತರಣೆ, ಡಾಂಬರೀಕರಣ, ಕಾಂಕ್ರಿಟ್‌ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.

1 ಕಿ.ಮೀ ರಸ್ತೆ ಅಭಿವೃದ್ಧಿಗೆ ₹ 1.41 ಕೋಟಿ ನಿಗದಿಯಾಗಿದೆ. ಜನಿವಾರ ಕೆರೆ ಏರಿ ಯಥಾ ಸ್ಥಿತಿಯಲ್ಲಿರಲಿದೆ. ರಾಚೇನಹಳ್ಳಿ ಗ್ರಾಮದ ಬಳಿ ಬೃಹತ್‌ ಹೇಮಾವತಿ ನಾಲೆ ಹಾದು ಹೋಗಿದ್ದು, ಆ ಜಾಗದಲ್ಲಿಯೂ ಸೇತುವೆ ವಿಸ್ತರಣೆ ಆಗುವುದಿಲ್ಲ.

ADVERTISEMENT

ಈಗಿರುವ ರಸ್ತೆಯನ್ನು 7 ಮೀಟರ್‌ನಿಂದ 10 ಮೀಟರ್‌ಗೆ ವಿಸ್ತರಿಸಿ ಡಾಂಬರೀಕರಣ ಮಾಡಲಾಗುತ್ತದೆ. ಹಾಗಾಗಿ ರಸ್ತೆಯ ಎರಡೂ ಬದಿಯಲ್ಲಿರುವ 636 ಮರಗಳನ್ನು ಈವರೆಗೆ ತೆರವುಗೊಳಿಸಿಲ್ಲ. ಜತೆಗೆ ವಿದ್ಯುತ್‌ ಕಂಬ, ಪರಿವರ್ತಕಗಳನ್ನು ಸ್ಥಳಾಂತರಿಸದೆ ಕಾಮಗಾರಿಗೆ ಹಿನ್ನಡೆಯಾಗಿದೆ.

ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯ 800 ಮೀಟರ್‌ ರಸ್ತೆ ವಿಸ್ತರಣೆ ಕಾರ್ಯಕ್ಕೆ ಕೆಲವು ಮನೆ ಹಾಗೂ ಕಟ್ಟಡಗಳು ಅಡ್ಡವಿದ್ದು, ಜಿಲ್ಲಾಡಳಿತ ಇನ್ನೂ ತೆರವುಗೊಳಿಸಿಲ್ಲ.

‘ಕೆಪಿಟಿಸಿಎಲ್‌, ಅರಣ್ಯ ಇಲಾಖೆಗೆ ಪತ್ರ ವ್ಯವಹಾರ ಮಾಡಿದ್ದರೂ ಸೂಕ್ತ ಸ್ಪಂದನೆ ದೊರಕಿಲ್ಲ. ಮರ ಹಾಗೂ ವಿದ್ಯುತ್‌ ಕಂಬಗಳನ್ನು ತೆರವು ಮಾಡದೆ ರಸ್ತೆ ವಿಸ್ತರಣೆ ಕಾರ್ಯಕ್ಕೆ ತೊಂದರೆಯಾಗಿದೆ. ಈ ಎರಡೂ ಕೆಲಸವಾದರೆ ಜನವರಿ ಎರಡನೇ ವಾರದಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಎಂಜಿನಿಯರ್‌ ಎಚ್‌.ರಮೇಶ್‌ ತಿಳಿಸಿದರು.

‘ಮರಗಳನ್ನು ಕಟಾವು ಮಾಡಲು ಹರಾಜು ಪ್ರಕ್ರಿಯೆ ನಡೆದಿದ್ದು, ತೆರಿಗೆ ಸೇರಿ ₹ 22 ಲಕ್ಷಕ್ಕೆ ಹರಾಜಾಗಿವೆ. ಅಂತಿಮ ಬಿಡ್‌ ಪಡೆದುಕೊಂಡ ನಾಲ್ವರು ಇನ್ನೂ ಇಲಾಖೆಗೆ ಹಣವನ್ನೇ ಪಾವತಿಸಿಲ್ಲ. ಹಾಗಾಗಿ ಮರು ಹರಾಜು ಮಾಡಬೇಕಾಗುತ್ತದೆ. ನಿಯಮದ ಪ್ರಕಾರ ಹರಾಜು ನಡೆಸಿ, ಮರ ತೆರವುಗೊಳಿಸಲು ಒಂದು ತಿಂಗಳು ಸಮಯ ಬೇಕಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೇ, ಮಹೋತ್ಸವದ ಅಂಗವಾಗಿ ಜಿಲ್ಲೆಯ 20 ರಸ್ತೆಗಳನ್ನು ಒಟ್ಟು ₹ 149.7 ಕೋಟಿ (ಲೋಕೋಪಯೋಗಿ ಇಲಾಖೆ ₹ 87.70 ಕೋಟಿ ಹಾಗೂ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿ ₹ 60 ಕೋಟಿ) ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಲ್ಲಿ ಕೆಲ ರಸ್ತೆಗಳ ಕಾಮಗಾರಿಗಳು ಆರಂಭವಾಗಿವೆ.

‘ಗೊಮ್ಮಟ ನಗರಿಯಲ್ಲಿ ಸಾಲು, ಸಾಲು ಸಮ್ಮೇಳನಗಳು, ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಮುಂದೆ ಸರ್ವಧರ್ಮ ಸಮ್ಮೇಳನ, ಕನ್ನಡ ಜೈನ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆದ್ದರಿಂದ ಕಾಮಗಾರಿ ತುರ್ತಾಗಿ ನಡೆಯದಿದ್ದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಮಂಜು

* * 

ವಿದ್ಯುತ್‌ ಕಂಬ ತೆರವುಗೊಳಿಸಲು ₹ 28.5 ಲಕ್ಷ ಸೇವಾ ಶುಲ್ಕವನ್ನು ಗುತ್ತಿಗೆದಾರರು ಪಾವತಿಸಿದ ತಕ್ಷಣ ಕಂಬಗಳ ಬದಲಾವಣೆ ಮಾಡಲಾಗುವುದು.
ಶ್ರೀಧರ್‌,
ಸೆಸ್ಕ್ ಸಹಾಯಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.