ADVERTISEMENT

ದೇಗುಲದ ಕಳೆಗುಂದಿಸಿದ ಉದ್ಯಾನ..!

ಹಳೇಬೀಡು; ಮಳೆ ಇಲ್ಲದೆ ಒಣಗುತ್ತಿದೆ ಹೊಯ್ಸಳೇಶ್ವರ ದೇವಾಲಯದ ಆವರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:34 IST
Last Updated 26 ಸೆಪ್ಟೆಂಬರ್ 2016, 9:34 IST
ದೇಗುಲದ ಕಳೆಗುಂದಿಸಿದ ಉದ್ಯಾನ..!
ದೇಗುಲದ ಕಳೆಗುಂದಿಸಿದ ಉದ್ಯಾನ..!   

ಹಳೇಬೀಡು: ಮಳೆ ಇಲ್ಲದೆ ಪಟ್ಟಣದ ವಿಶ್ವಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯದ ಉದ್ಯಾನ ಒಣಗಿದ್ದು, ಶಿಲ್ಪಕಲಾ ದೇಗುಲದ ಅಂದಗೆಡಿಸಿದೆ.
ಹಸಿರಿನಿಂದ ನಳನಳಿಸುತ್ತಿದ್ದ ಉದ್ಯಾನದಲ್ಲಿ ವಿವಿಧ ಬಣ್ಣದ ಅಲಂಕಾರಿಕ ಹೂವುಗಳು ಹಾಗೂ ಗಿಡಗಳು ಕಂಗೊಳಿಸುತ್ತಿದ್ದವು. ಶಿಲ್ಪಿಗಳ ಕೈಚಳಕದಿಂದ ಮನಸೂರೆಗೊಳ್ಳುವಂತೆ ರೂಪುಗೊಂಡಿರುವ ಹೊಯ್ಸಳೇಶ್ವರ ದೇವಾಲಯಕ್ಕೆ ಉದ್ಯಾನ ಆಕರ್ಷಣೆ ನೀಡುತ್ತಿತ್ತು. ದೂರದಿಂದ ಬಂದ ಪ್ರವಾಸಿಗರು  ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಮೈದಾನ ಪೂರ್ಣ ಒಣಗಿರುವುದರಿಂದ ಪ್ರವಾಸಿ ಗರು ಉದ್ಯಾನದತ್ತ ಪಾದ ಬೆಳೆಸುತ್ತಿಲ್ಲ. ಒಣಗಿದ ಉದ್ಯಾನ ಕಂಡ ಪ್ರವಾಸಿಗರು ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಉದ್ಯಾನ ನಿರ್ವಹಣೆಗಾಗಿ ಇದ್ದ ಮೂರು ಕೊಳವೆಬಾವಿಗಳು ಬತ್ತಿ ಹೋಗಿವೆ. ಹೊಸದಾಗಿ ಕೊಳವೆಬಾವಿ ತೊಡಿಸಿದರೂ ನೀರಿನ ಪಸೆ ಸಿಗುತ್ತಿಲ್ಲ’  ಎನ್ನುತ್ತಾರೆ ಉದ್ಯಾನ ಸಿಬ್ಬಂದಿ.

ಟ್ಯಾಂಕರ್‌ ನೀರು ಖರೀದಿ ಮಾಡಿಯಾದರೂ ದೇವಾಲಯದ ಮುಂಭಾಗದ ಸ್ವಲ್ಪ ಭಾಗದಲ್ಲಿ ಹಸಿರು ಉಳಿಸಬೇಕು ಎಂಬ ಮಾತು ಸ್ಥಳಿಯರಿಂದ ಕೇಳಿಬರುತ್ತಿದೆ.
ಕುಡಿಯುವ ನೀರಿಗೆ ಬರ ಬಂದಿದೆ ಇಂಥ ಪರಿಸ್ಥಿತಿಯಲ್ಲಿ ಟ್ಯಾಂಕರ್‌ ನೀರು ಖರೀದಿಸುವುದು ಸಹ ಸುಲಭವಲ್ಲ ಎಂಬ ಮಾತು ಸಹ ಹಲವರದ್ದು.
ಮೈಸೂರು, ಹಂಪಿಗೆ ಭೇಟಿ

ನೀಡುವ ಬಹುತೇಕ ಪ್ರವಾಸಿಗರು ಹಳೇಬೀಡಿಗೂ ಬರುತ್ತಾರೆ. ಹಾಗೆಯೇ, ಧರ್ಮಸ್ಥಳ, ಹೊರನಾಡು, ಶೃಂಗೇರಿ ಮೊದಲಾದ ಸ್ಥಳಗಳಿಗೆ ಪ್ರಯಾಣ ಮಾಡುವ ಯಾತ್ರಿ ಗಳು ಮಾರ್ಗಮಧ್ಯದಲ್ಲಿ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಊಟದ ಬುತ್ತಿ ಕಟ್ಟಿಕೊಂಡು ಬರುವ ಹಲವು ಪ್ರವಾಸಿಗರು ಉದ್ಯಾನದಲ್ಲಿ ಉಪಹಾರ ಮಾಡುತ್ತಿದ್ದರು. ಮುಳ್ಳಿನಂತೆ ಚುಚ್ಚುವ ಒಣಗಿದ ಹುಲ್ಲಿನ ಕಡ್ಡಿಯ ಮೇಲೆ ಈಗ ಒಂದು ಕ್ಷಣ ಸಹ ಕೂರಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

‘ಹೊಯ್ಸಳೇಶ್ವರ ದೇವಾಲಯದ ಸನಿಹದಲ್ಲಿರುವ ಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಬೇಲೂರಿನ ಯಗಚಿ ಅಣೆಕಟ್ಟೆಯಿಂದ ನೀರು ತುಂಬಿಸಿದರೆ ಉದ್ಯಾನದ  ಬಾವಿಗಳಲ್ಲಿ ಅಂತರ್ಜಲ ವೃದ್ಧಿಸುತ್ತದೆ. ಕೆರೆಯಲ್ಲಿ ಪ್ರವಾಸಿಗರಿಗೆ ಮುದ ನೀಡುವಂತೆ ದೋಣಿವಿಹಾರ ಆರಂಭಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಸರ್ಕಾರ ಗಮನ ಹರಿಸಬೇಕಾಗಿದೆ’ ಎನ್ನುತ್ತಾರೆ ಎಚ್.ಎಲ್‌.ಚಂದ್ರಶೇಖರ್.
- ಎಚ್.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.