ADVERTISEMENT

ನವಜಾತ ಶಿಶುಗಳನ್ನು ಬೀದಿಗೆ ಬಿಸಾಡದಿರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 10:11 IST
Last Updated 23 ಡಿಸೆಂಬರ್ 2017, 10:11 IST

ಹಾಸನ: ಮಕ್ಕಳಿಗೆ ಸಿಗಬೇಕಾದ ಪೋಷಣೆ, ರಕ್ಷಣೆ, ಅಕ್ಕರೆ ಸಿಗದೆ ಹೋದರೆ ಬಾಲ್ಯ ಕಮರಿ ಹೋಗುತ್ತದೆ. ಅಂತಹ ಮಕ್ಕಳು ಸಮಾಜ ಮತ್ತು ದೇಶಕ್ಕೆ ಹೊರೆಯಾಗುತ್ತಾರೆ ಎಂದು ನ್ಯಾಯಾಧೀಶೆ ವಾಣಿ ಎ. ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಬಾಲಕಿಯರ ಬಾಲಮಂದಿರದಲ್ಲಿ ಬಾಲನ್ಯಾಯ ಮಂಡಳಿ ಸ್ಥಾಪಿಸಿರುವ ಮಮತೆಯ ತೊಟ್ಟಿಲು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಅನಾಥ, ಪರಿತ್ಯಕ್ತ, ನಿರ್ಲಕ್ಷ್ಯಕ್ಕೊಳಗಾದ ಮಕ್ಕಳನ್ನು ಸಂರಕ್ಷಿಸಿ ಪುನರ್ವಸತಿ ಕಲ್ಪಿಸಲು ಒಂದು ವ್ಯವಸ್ಥೆಯೇ ಕೆಲಸ ಮಾಡುತ್ತಿದೆ. ಆದರೂ, ಕೆಲವು ಪೋಷಕರು ತಮಗೆ ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಕಂಡು ಬರುತ್ತಿದೆ. ಬಸ್ ನಿಲ್ದಾಣ, ಆಸ್ಪತ್ರೆ ಆವರಣ, ಪೊದೆ, ತೊಟ್ಟಿ, ಚರಂಡಿ ಹಾಗೂ ಜಮೀನುಗಳಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳು ಬೀದಿನಾಯಿ, ಇತರೆ ವಿಷಜಂತುಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ ಮಾತನಾಡಿ, ಮಗುವನ್ನು ಅನಧಿಕೃತವಾಗಿ ಪಡೆಯುವುದು ಹಾಗೂ ಮಾರಾಟ ಮಾಡುವಂತಿಲ್ಲ. ಮಕ್ಕಳ ನ್ಯಾಯ ಕಾಯ್ದೆ 2015ರ ಅನ್ವಯ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಕೊಂಡುಕೊಂಡವರಿಗೆ 5 ವರ್ಷಗಳ ಕಠಿಣ ಸಜೆ ಹಾಗೂ ₹ 1ಲಕ್ಷ ದಂಡ ವಿಧಿಸಬಹುದಾಗಿದೆ. ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದಲ್ಲಿ 7 ವರ್ಷ ಕಠಿಣ ಸಜೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಮಕ್ಕಳ ರಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಬಾಲನ್ಯಾಯ ಕಾಯ್ದೆ ಸೆಕ್ಷನ್ 34ರ ಅನ್ವಯ ಅನಾಥ ಮಕ್ಕಳನ್ನು ನೋಡಿದ ಯಾರೇ ಆದರೂ 24 ಗಂಟೆಯೊಳಗೆ ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಅಂಗನವಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ಇದರಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಕ್ಕಳು ಬೇಡವಾದ ಪೋಷಕರು ಹತ್ತಿರದ ವಿಶೇಷ ದತ್ತು ಕೇಂದ್ರಗಳಿಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ನೇರವಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದು ಒಪ್ಪಿಸಬಹುದು. ಒಂದು ವೇಳೆ ಮಗುವನ್ನು ಪುನಃ ಪಡೆಯಲು 60 ದಿನಗಳ ಕಾಲಾವಕಾಶ ಇರುತ್ತದೆ. ಇಂತಹ ಪ್ರಕರಣಗಳನ್ನು ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ಮಕ್ಕಳನ್ನು ಎಲ್ಲಿಂದರಲ್ಲಿ ಬಿಸಾಡದೇ ಒಂದು ಕುಟುಂಬದ ಸಂತೋಷದಲ್ಲಿ ಭಾಗಿಯಾಗಿ ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆದುಕೊಳ್ಳಬೇಕು ಎಂದರು.

ಮಕ್ಕಳು ಇಲ್ಲದ ದಂಪತಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಕಾನೂನಿನ ಮೂಲಕ ಮಕ್ಕಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಬಾಲಮಂದಿರದ ಅಧೀಕ್ಷರಾದ ಇಂಪಾ, ಸ್ವಾಮಿಗೌಡ ಇದ್ದರು.

* * 

ಬಾಲಮಂದಿರಗಳು, ದತ್ತು ಸಂಸ್ಥೆಗಳಲ್ಲಿ ಇಟ್ಟಿರುವ ತೊಟ್ಟಿಲಲ್ಲಿ ಮಕ್ಕಳನ್ನು ಬಿಡುವ ಮೂಲಕ ಅಮೂಲ್ಯ ಜೀವವನ್ನು ರಕ್ಷಿಸಬೇಕು.
ವಾಣಿ ಶೆಟ್ಟಿ, ನ್ಯಾಯಾಧೀಶೆ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.