ADVERTISEMENT

ಪರಿಹಾರ ನೀಡದಿದ್ದರೆ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 8:46 IST
Last Updated 14 ಸೆಪ್ಟೆಂಬರ್ 2017, 8:46 IST

ಅರಸೀಕೆರೆ: ಬರದಿಂದಾಗಿ ತೆಂಗು ಮತ್ತು ಅಡಿಕೆ ಸುಳಿ ಒಣಗಿ ಹೋಗುತ್ತಿದ್ದು, ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ಘೋಷಣೆ ಮಾಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ತೆಂಗು ಹಾಗೂ ಅಡಿಕೆ ಮರಗಳು ಒಣಗಿ ಹೋಗುತ್ತಿವೆ. ಫಸಲು ಬಿಡುತ್ತಿದ್ದ ತೆಂಗಿನ ಮರಗಳು ಸುಳಿ ಒಣಗಿ ನೆಲ ಕಚ್ಚಿವೆ. ಇದರಿಂದ ತೆಂಗು ಬೆಳೆಗಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾದಿಸಿದರು.

ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಚನ್ನರಾಯಪಟ್ಟಣ ಶಾಸಕ ಸಿ.ಎನ್‌ .ಬಾಲಕೃಷ್ಣ ಅವರೊನ್ನಳ ಗೊಂಡಂತೆ ಅಧಿಕಾರಿಗಳು  ಕೇಂದ್ರ ಕೃಷಿ ಸಚಿವ  ರಾಧಾಮೋಹನ್‌  ಸಿಂಗ್‌ ಅವರನ್ನು ಭೇಟಿ ಮಾಡಿ ಸಂಕಷ್ಟದಲ್ಲಿರುವ  ರಾಜ್ಯದ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಮಾಲ್ಕಿ ಮಾದರಿಯಲ್ಲಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

‘ಕನಿಷ್ಠ ₹ 9,500 ಕೋಟಿ ಹಣ ನೀಡಬೇಕಾಗುತ್ತದೆ. ಹಣಕಾಸು ಇಲಾಖೆಯಿಂದ ಈ ಪ್ರಮಾಣದ ಹಣ ನೀಡಲು ಸಾಧ್ಯವಾಗುವುದೇ ಎಂದು ಕೈಚೆಲ್ಲಿದರು. ಕೇಂದ್ರ ಸಚಿವರ ನಿಲುವಿನಿಂದ ದಿಕ್ಕೇ ತೋಚದಂತಾಗಿದೆ’ ಎಂದು ಹೇಳಿದರು.

ADVERTISEMENT

ಆದ್ದರಿಂದ ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತೆಂಗು ಹಾಗೂ ಅಡಿಕೆ ಬೆಳೆಯುವ ಪ್ರದೇಶಗಳ ಶಾಸಕರ ಸಭೆ ಕರೆದು ಮೊದಲು ರಾಜ್ಯ ಸರ್ಕಾರದ ಪರಿಹಾರದ ಪಾಲನ್ನು ಘೋಷಿಸಬೇಕು. ಬಳಿಕ ಅವರ ನೇತೃತ್ವದಲ್ಲಿಯೇ ನಿಯೋಗ ಕರೆದೊಯ್ದು ಪ್ರಧಾನಿ ಮೇಲೆ ಒತ್ತಡ ಹೇರದಿದ್ದರೆ ಶೇಕಡ 75ರಷ್ಟು ಬೆಳೆಗಾರರ ಬದುಕು ಬೀದಿ ಪಾಲಾಗಲಿದೆ ಎಂದು ತಿಳಿಸಿದರು.

ಅರಸೀಕೆರೆ ತಾಲ್ಲೂಕು ಒಂದರಲ್ಲೇ 30ಲಕ್ಷ ತೆಂಗಿನ ಮರಗಳ ಪೈಕಿ 15ಲಕ್ಷ ಕ್ಕೂ ಹೆಚ್ಚಿನ ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ. ಪರಿಸ್ಥಿತಿ ಗಂಭೀರವಾಗಿದ್ದರೂ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ತೋರುವ ಮೂಲಕ ಕಾಲ ಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯಕ್‌, ಉಪಾಧ್ಯಕ್ಷ ಬಸವಲಿಂಗಯ್ಯ, ತಾಲ್ಲೂಕು ಜೆಡಿಎಸ್‌ ಕಾರ್ಯದರ್ಶಿ ಸುಬ್ರಮಣ್ಯಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.