ADVERTISEMENT

ಪ್ರಾಚೀನ ಸ್ಮಾರಕ, ವಿಗ್ರಹ ಸಂರಕ್ಷಿಸಿ

ವಿಶ್ವ ವಸ್ತುಸಂಗ್ರಹಾಲಯ ದಿನಾಚರಣೆ; ಪುರಾತತ್ವ ಶಾಸ್ತ್ರಜ್ಞ ಅರವಝಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 11:29 IST
Last Updated 19 ಮೇ 2018, 11:29 IST

ಹಳೇಬೀಡು: ‘ಇತಿಹಾಸದಲ್ಲಿ ಬದುಕಿನ ಪಾಠ ಅಡಗಿದೆ. ಹೀಗಾಗಿ ಇತಿಹಾಸ ಉಳಿಸುವ ನಿಟ್ಟಿನಲ್ಲಿ ಸ್ಮಾರಕ, ಶಿಲಾಶಾಸನ ಹಾಗೂ ಪ್ರಾಚೀನ ವಿಗ್ರಹಗಳನ್ನು ಸಂರಕ್ಷಿಸಿ ಅಧ್ಯಯನ ನಡೆಸಬೇಕಾಗಿದೆ’ ಎಂದು ಸಹಾಯಕ ಪುರಾತತ್ವ ಶಾಸ್ತ್ರಜ್ಞ ಪಿ.ಅರವಝಿ ಹೇಳಿದರು.

ಪಟ್ಟಣದ ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಶುಕ್ರವಾರ ಕೇಂದ್ರ ಪುರಾತತ್ವ ವಸ್ತು ಸಂಗ್ರಹಾಲಯ ಆಯೋಜಿಸಿದ್ದ ವಿಶ್ವ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತಿಹಾಸದ ಅರಿವು ಬಾಲ್ಯದಿಂದಲೇ ಮೂಡಬೇಕು, ಮಕ್ಕಳು ಯಾವುದೇ ಅಧ್ಯಯನ ಮಾಡಿದರೂ ಇತಿಹಾಸವನ್ನು ಅರಿತು, ಐತಿಹಾಸಿಕ ಅವಶೇಷಗಳನ್ನು ಉಳಿಸಿ ಸಂರಕ್ಷಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಪ್ರತಿವರ್ಷ ವಸ್ತುಸಂಗ್ರಹಾಲಯ ದಿನದಂದು ಮಕ್ಕಳಿಗೆ ಪ್ರಾಚೀನ ಸ್ಮಾರಕ, ವಿಗ್ರಹಗಳ ಚಿತ್ರ ಬರೆಯುವ ಸ್ಪರ್ಧೆ ನಡೆಸಲಾಗುತ್ತದೆ. ಇದರೊಂದಿಗೆ ಮಕ್ಕಳಿಗೆ ಪ್ರಾಚೀನತೆಯ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

‘ಕಳೆದ ವರ್ಷ 157 ದೇಶದಲ್ಲಿ 36 ಸಾವಿರ ಮ್ಯೂಜಿಯಂಗಳಲ್ಲಿ ವಿಶ್ವ ವಸ್ತುಸಂಗ್ರಹಾಲಯ ದಿನ ಆಚರಿಸಲಾಗಿದೆ. ಕಾರ್ಯಕ್ರಮದಲ್ಲಿ ಸ್ಮಾರಕ, ವಿಗ್ರಹ, ಶಿಲಾಶಾಸನ ಮಾತ್ರವಲ್ಲದೆ, ರಾಜಮಹಾರಾಜರು ಯುದ್ಧ ಸಂದರ್ಭದಲ್ಲಿ ಉಪಯೋಗಿಸಿದ ಶಸ್ತ್ರಾಸ್ತ್ರಗಳ ಬಗ್ಗೆ ಚಿತ್ರಸಹಿತ ಮಾಹಿತಿ ನೀಡಲಾಯಿತು’ ಎಂದರು.

‘ರಾಜಮಹಾರಾಜರು ನೆಲೆಸಿ ಈಗ ಹಾಳು ಸುರಿಯುತ್ತಿರುವ ಸಾಕಷ್ಟು ಗ್ರಾಮಗಳಲ್ಲಿ ಇತಿಹಾಸದ ಅವಶೇಷಗಳು ಮಣ್ಣಿನಡಿ ಮಣ್ಣಾಗುತ್ತಿವೆ. ಸಾಕಷ್ಟು ಜನರಿಗೆ ಇತಿಹಾಸದ ಮಹತ್ವದ ಅರಿವಿಲ್ಲದೆ. ಪ್ರಾಚೀನ ಅವಶೇಷಗಳನ್ನು ಹಾಳುಗೆಡವುತ್ತಿದ್ದಾರೆ. ತಮ್ಮ ಗ್ರಾಮದಲ್ಲಿರುವ ಸ್ಮಾರಕ ಮೊದಲಾದ ಇತಿಹಾಸದ ಅವಶೇಷಗಳನ್ನು ಸಂರಕ್ಷಿಸಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಅರವಝಿ ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಗೋವಿಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸ್ಮಾರಕ ರಕ್ಷಕ ಕಿಶೋಜಿರಾವ್‌ ಮಾತನಾಡಿದರು.

ಹೊಯ್ಸಳೇಶ್ವರ ದೇವಾಲಯಕ್ಕೆ ಆಗಮಿಸಿದ್ದ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.