ADVERTISEMENT

ಬಸ್ ನಿಲ್ದಾಣ ಉದ್ಘಾಟನೆಗೆ ಗ್ರಹಣ

ಕೆಎಸ್‌ಆರ್‌ಟಿಸಿ, ನಗರಸಭೆ ನಡುವೆ ರಾಜಕೀಯ ತಿಕ್ಕಾಟ; ಬಗೆಹರಿಯದ ಸಮಸ್ಯೆ

ಕೆ.ಎಸ್.ಸುನಿಲ್
Published 13 ಮಾರ್ಚ್ 2017, 6:52 IST
Last Updated 13 ಮಾರ್ಚ್ 2017, 6:52 IST
ಹಾಸನ ನಗರ ಮತ್ತು ಗ್ರಾಮೀಣ ಬಸ್‌ ನಿಲ್ದಾಣ
ಹಾಸನ ನಗರ ಮತ್ತು ಗ್ರಾಮೀಣ ಬಸ್‌ ನಿಲ್ದಾಣ   

ಹಾಸನ: ಬಹುಕೋಟಿ ವೆಚ್ಚದಲ್ಲಿ ನವೀಕೃತಗೊಂಡಿರುವ ನಗರದ ಹಳೆಯ ಬಸ್‌ ನಿಲ್ದಾಣದ ಉದ್ಘಾಟನೆಗೆ ಗ್ರಹಣ ಹಿಡಿದಿದೆ.

ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ನಗರಸಭೆ ಹಾಗೂ ಕೆಎಸ್‌ಆರ್‌ಟಿಸಿ ತಿಕ್ಕಾಟದಿಂದಾಗಿ ಸದ್ಯಕ್ಕೆ ಉದ್ಘಾಟನೆಯಾಗುವ ಲಕ್ಷ್ಮಣಗಳು ಕಾಣುತ್ತಿಲ್ಲ.

2012 ರಿಂದ ಹಲವು ಬಾರಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ನಗರಸಭೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪತ್ರ ಬರೆದರೂ ಪರವಾನಗಿ ಮಾತ್ರ  ದೊರೆತಿಲ್ಲ.

ಸುಮಾರು ₹ 33 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ 650 ಬಸ್‌ಗಳು ಬಂದು ಹೋಗಬಹುದಾದ ವಿಶಾಲವಾದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಬೃಹತ್‌ ಮಾಲ್‌ಗಳು  ಹಾಗೂ 24 ವಾಣಿಜ್ಯ ಮಳಿಗೆಗೂ ಅವಕಾಶ ನೀಡಲಾಗಿದೆ.

ನೆಲಮಳಿಗೆಯಲ್ಲಿ 65 ಸಾವಿರ ಅಡಿ ವಿಶಾಲವಾದ ಪ್ರದೇಶವಿದ್ದು, ಅದರಲ್ಲಿ 30 ರಿಂದ 40 ಕಾರುಗಳು, ಎರಡು ಸಾವಿರ ದ್ವಿಚಕ್ರ ವಾಹನ ನಿಲುಗಡೆ ಮಾಡಬಹುದು. ಸ್ಥಳೀಯ ಬಸ್‌ಗಳು ಮಾತ್ರ ಈ ನಿಲ್ದಾಣದಿಂದ ಸಂಚಾರ ನಡೆಸುತ್ತವೆ. ಒಂದೇ ಬಾರಿಗೆ 40 ಬಸ್‌ಗಳು ಸಂಚಾರ ನಡೆಸುತ್ತವೆ. ಹೊರ ಜಿಲ್ಲೆಯ ಬಸ್‌ಗಳು ಇಲ್ಲಿ ಬಂದರೂ ಹೆಚ್ಚು ಸಮಯ ನಿಲ್ಲುವುದಿಲ್ಲ. ಗ್ರಾಮೀಣ ಹಾಗೂ ನಗರ ಬಸ್‌ಗಳು ಮಾತ್ರ ಇಲ್ಲಿ ಸಂಚಾರ ನಡೆಸುತ್ತವೆ.
 
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್‌ಕುಮಾರ್‌ ಮಾತನಾಡಿ, ‘ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ  ಒಳಚರಂಡಿ ಮತ್ತು ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪರವಾನಗಿ ನೀಡಿಲ್ಲ.  ನಾಲ್ಕು ವರ್ಷದಿಂದ 20 ಪತ್ರ ಬರೆಯಲಾಗಿದೆ. ಡಿ.ಸಿ ಸಹ ಪತ್ರ ಬರೆದಿದ್ದಾರೆ. ಇದುವರೆಗೂ ಉತ್ತರ ಬಂದಿಲ್ಲ. ಕಾರಣ ಗೊತ್ತಿಲ್ಲ. ಕೆಲ ದಿನಗಳ ಹಿಂದೆ ಮುಖ್ಯ ಎಂಜಿನಿಯರ್‌ ಸಹ  ಕಾಮಗಾರಿ ಪರಿಶೀಲಿಸಿ ಹೋಗಿದ್ದಾರೆ’ ಎಂದು ಅವರು ತಿಳಿಸಿದರು.
ಆದರೆ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ಕುಮಾರ್‌ ಹೇಳುವುದೇ ಬೇರೆ. ‘ನಗರಸಭೆ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ.ನಮ್ಮಿಂದ ಯಾವುದೇ ಸಮಸ್ಯೆ ಇಲ್ಲ. ಟರ್ಮಿನಲ್‌  ಕೆಲಸ ಮುಗಿದ ಬಳಿಕ ಬಸ್‌ ನಿಲ್ದಾಣ ಉದ್ಘಾಟನೆಯಾಗಲಿದೆ’ ಎಂದು ಉತ್ತರಿಸಿದರು.

ಈ ಬಗ್ಗೆ ಶಾಸಕ ಎಚ್‌.ಎಸ್‌.ಪ್ರಕಾಶ್‌ ಅವರನ್ನು ಪ್ರಶ್ನಿಸಿದರೆ, ‘ಬಸ್‌ ಒಳಗೆ ಬರುವ ಮತ್ತು ಹೋಗುವ ಮಾರ್ಗ ಅವೈಜ್ಞಾನಿಕವಾಗಿದೆ.  ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆವರೆಗೂ ಇರುವ ಕಟ್ಟಡಗಳನ್ನು ಕೆಡವಿಲ್ಲ. ಇದನ್ನು ಸಚಿವರ ಗಮನಕ್ಕೆ ತರಲಾಗಿದ್ದು, ಮುಖ್ಯ ಎಂಜಿನಿಯರ್‌ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸುವುದಾಗಿ ಹೇಳಿದ್ದಾರೆ. ನಗರಸಭೆ ಜಾಗವನ್ನೇ ನಿಲ್ದಾಣಕ್ಕೆ ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೆಲ ಮಾರ್ಪಾಡು ಮಾಡುವಂತೆ ನಗರಸಭೆಯವರು ಕೇಳಿದ್ದಾರೆ. ಅದಕ್ಕೆ ಒಪ್ಪಿದರೆ ಲೈಸೆನ್ಸ್‌ ನೀಡಲಾಗುತ್ತದೆ.  ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಎಲ್ಲವನ್ನು ವಾಣಿಜ್ಯ   ಉದ್ದೇಶದಿಂದ ನೋಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳಚರಂಡಿ ಮತ್ತು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಂತೆ ಕೋರಿ ಹಲವು ಬಾರಿ ನಗರಸಭೆಗೆ ಪತ್ರ ಬರೆದರೂ ಅನುಮತಿ ನೀಡಿಲ್ಲ
- ಯಶವಂತಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT