ADVERTISEMENT

ಬಿಸಿಯೂಟ ಮಾಡಿದ 22 ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:47 IST
Last Updated 12 ಜುಲೈ 2017, 6:47 IST

ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿಯೂಟ ಮಾಡಿದ 22 ಮಕ್ಕಳು ಅಸ್ವಸ್ಥಗೊಂಡಿದ್ದು ಇಲ್ಲಿಯ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಲೆಯಲ್ಲಿ 180 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಮಧ್ಯಾಹ್ನ ಬಿಸಿಯೂಟ ಮಾಡಿದ್ದರು. ಸಂಜೆ 4ರ ಸುಮಾರಿಗೆ ವಿದ್ಯಾರ್ಥಿಗಳಾದ ಸವಿತಾ ಮತ್ತು ಜೀವನ್‌ಗೆ ತಲೆ ಸುತ್ತಿದಂತಾಗಿ ವಾಂತಿ ಮಾಡಿಕೊಂಡರು. ತಕ್ಷಣ ಇವರಿಬ್ಬರನ್ನು ಶಿಕ್ಷಕರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು.

ನಂತರ ಇನ್ನಷ್ಟು ವಿದ್ಯಾರ್ಥಿಗಳಾದ ಗಾಯತ್ರಿ, ಅಶ್ವಿನಿ, ತುಳಸಿ, ಸೃಷ್ಟಿ, ವೈಶಾಲಿ, ಪಾರ್ಥ, ಆಕಾಶ, ಸಂದೇಶ್, ರಾಕೇಶ್‌, ನಯನಾ, ಶ್ರೇಯಾ ಸೇರಿದಂತೆ 20 ವಿದ್ಯಾರ್ಥಿಗಳು ತಮಗೂ ತಲೆ ಸುತ್ತಿದಂತೆ ಆಗುತ್ತಿದೆ. ವಾಂತಿ ಬರುತ್ತದೆ ಎಂದರು. ಗಾಬರಿಗೊಂಡ ಶಿಕ್ಷಕರು ತಕ್ಷಣ ಈ ವಿದ್ಯಾರ್ಥಿಗಳನ್ನು ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಗೆ ಕರೆತಂದು ತುರ್ತು ಚಿಕಿತ್ಸೆ ಕೊಡಿಸಿದರು.

ADVERTISEMENT

ಸವಿತಾ ಹಾಗೂ ಜೀವನ್‌ಗೆ ಗ್ಲುಕೋಸ್‌ ಡ್ರಿಪ್ಸ್‌ ಹಾಕಲಾಗಿದೆ. ಉಳಿದಂತೆ 20 ವಿದ್ಯಾರ್ಥಿಗಳು ಸಹಜ ಸ್ಥಿತಿಗೆ ಬಂದಿದ್ದಾರೆ.  180 ಮಕ್ಕಳೊಂದಿಗೆ ತಾವೂ ಸೇರಿದಂತೆ 6 ಶಿಕ್ಷಕರು ಸಹ ಮಧ್ಯಾಹ್ನ ಬಿಸಿಯೂಟ ಮಾಡಿದ್ದೇವೆ. ನಮಗೆ ಏನೂ ತೊಂದರೆ ಆಗಿಲ್ಲ ಎಂದು ಇದೇ ಶಾಲೆಯ ಶಿಕ್ಷಕಿ ರೇಣುಕಾ ತಿಳಿಸಿದರು. ಆಸ್ಪತ್ರೆಗೆ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಆರೋಗ್ಯ ಚೇತರಿಕೆ
ಸಕಲೇಶಪುರ: ವಿದ್ಯಾರ್ಥಿಗಳು ಸೇವಿಸಿರುವ ಬಿಸಿಯೂಟವನ್ನು ಸಂಗ್ರಹಿಸಲಾಗಿದೆ. ಪರೀಕ್ಷಿಸಲು ಲ್ಯಾಬ್‌ಗೆ ಕಳಿಸಲಾಗುವುದು. ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸಿದೆ ಎಂದು ಡಾ.ಮಹೇಶ್‌ ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.