ADVERTISEMENT

ಬುದ್ಧನ ಶಾಂತಿ ಸಂದೇಶ ಸದಾ ಪ್ರಸ್ತುತ

ವಿಶ್ವಬೌದ್ಧ ಮಹಾಸಮ್ಮೇಳನದ ಪಂಚಶೀಲ ಪಾದಯಾತ್ರೆ ಸಮಾರಂಭದಲ್ಲಿ ಪುಟ್ಟೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 10:49 IST
Last Updated 2 ಜನವರಿ 2017, 10:49 IST

ಚನ್ನರಾಯಪಟ್ಟಣ: ಗೌತಮಬುದ್ಧ ಬೋಧಿಸಿದ ಶಾಂತಿ ಮಂತ್ರ ಎಂದಿಗೂ ಪ್ರಸ್ತುತ ಎಂದು ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಹೇಳಿದರು. ಇಂಟರ್‌ ನ್ಯಾಷನಲ್‌ ಬುದ್ದಿಸ್ಟ್‌ ಚಾರಿಟಬಲ್‌ ಟ್ರಸ್ಟ್‌, ಬೌದ್ಧ ಮಹಾ ಸಭಾದ ಸಹಯೋಗದಲ್ಲಿ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ವಿಶ್ವಬೌದ್ಧ ಮಹಾಸಮ್ಮೇಳನದ ಪಂಚಶೀಲ ಪಾದಯಾತ್ರೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾನ್‌ ಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು. ಮಹಾನ್‌ ಪುರುಷರು ಸಾರಿದ ತತ್ವ, ಸಂದೇಶ ಜಗತ್ತಿಗೆ ಅನ್ವಯವಾಗುತ್ತದೆ. ಜನತೆ ದ್ವೇಷ ಅಸೂಯೆ, ವೈಮನಸ್ಸು ತೊಡೆದು ಹಾಕಿ ಸಾಮರಸ್ಯದಿಂದ ಬದುಕು ಸಾಗಿಸಬೇಕು ಎಂದರು.

ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು, ಕುಮಾರವ್ಯಾಸ, ವಾಲ್ಮೀಕಿ ಪ್ರತಿಪಾದಿಸಿದ ತತ್ವಗಳನ್ನು ಪಾಲಿಸು ವುದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ತೀ.ನರಸೀಪುರದ ಬೌದ್ಧಬಿಕ್ಕು ಬೋಧಿದತ್ತ ಭಂತೇಜಿ ಆಶೀರ್ವಚನ ನೀಡಿ, ಪಂಚಶೀಲ ತತ್ವಗಳನ್ನು ಪಾಲಿಸುವುದರಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು. ಬೇಲೂರಿನ ಭಂತೇಜಿ ಬುದ್ಧಚಿತ್ತ, ಚನ್ನರಾಯಪಟ್ಟಣ ಭಂತೇಜಿ ಧರ್ಮಚಿತ್ತ ಸಾನ್ನಿದ್ಯ ವಹಿಸಿದ್ದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ಸಾಹಿತಿ ರಾಜಶೇಖರ್‌, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ.ಎನ್‌.ಮಂಜೇಗೌಡ, ಮುಖಂಡರಾದ ಲಕ್ಷ್ಮಯ್ಯ, ಆರ್‌. ಶ್ರೀನಿವಾಸ್‌, ಸಿ.ಎನ್‌.ಮಂಜುನಾಥ್‌, ಎಚ್‌.ಎಂ.ಗೌಡಯ್ಯ, ಶಿವಶಂಕರಕುಂಟೆ, ಶಿವಯ್ಯ, ಸಿದ್ದಲಿಂಗಯ್ಯ, ಚಂದ್ರಪ್ಪ, ಮಹಾದೇವಮ್ಮ, ರಾಮಚಂದ್ರ, ಕೆ.ನರಸಿಂಹಮೂರ್ತಿ, ಎನ್‌.ಬಿ. ಮಂಜಣ್ಣ, ಸಿ.ಜಿ.ಸೋಮಶೇಖರ್‌ ಇತರರು ಇದ್ದರು. ಆಲದಹಳ್ಳಿ ವೆಂಕಟೇಶ್ ಸ್ವಾಗತಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಂಚಶೀಲ ಪಾದಯಾತ್ರೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT