ADVERTISEMENT

ಬೇಸಿಗೆಗೂ ಮುನ್ನ ನೀರಿಗೆ ತತ್ವಾರ

ಬರಿದಾಗುತ್ತಿರುವ ಹೇಮಾವತಿ, ಯಗಚಿ ಜಲಾಶಯ

ಕೆ.ಎಸ್.ಸುನಿಲ್
Published 5 ಡಿಸೆಂಬರ್ 2016, 9:26 IST
Last Updated 5 ಡಿಸೆಂಬರ್ 2016, 9:26 IST
ಹಾಸನ ನಗರದ ಮಹಾವೀರ ಭವನ ಬಳಿಯ ನಿವಾಸಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ
ಹಾಸನ ನಗರದ ಮಹಾವೀರ ಭವನ ಬಳಿಯ ನಿವಾಸಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ   

ಹಾಸನ: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನಗರದ ವಿವಿಧ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕವೇ ನೀರು ಪೂರೈಸಲಾಗುತ್ತಿದೆ.

ನಿರೀಕ್ಷೆಯ ಪ್ರಮಾಣದಲ್ಲಿ ಹಿಂಗಾರು, ಮುಂಗಾರು ಮಳೆಯಾಗದ ಕಾರಣ ಕುಡಿಯುವ ನೀರಿನ ಸಮಸ್ಯೆ ಆರಂಭಗೊಂಡಿದ್ದು, ನಗರಸಭೆ ಹತ್ತಾರು ಟ್ಯಾಂಕರ್‌ಗಳ ಮೂಲಕ ನಗರದ 35 ವಾರ್ಡ್‌ ಜನರಿಗೆ ನೀರು ಸರಬರಾಜು ಮಾಡಲು ಹರಸಾಹಸ ಪಡುತ್ತಿದೆ. ಕಸ್ತೂರ ಬಾ ರಸ್ತೆಯ ಪಂಪ್‌ಹೌಸ್‌ ವಿತರಣಾ ಕೇಂದ್ರದ ಮುಂಭಾಗದ ಕೊಳವೆ ಬಾವಿಯಿಂದ ನೀರು ಪೂರೈಸಲು ಸಾಧ್ಯವಾಗಿದೆ.

ನಗರಕ್ಕೆ ಪ್ರತಿನಿತ್ಯ 23 ಎಂಎಲ್‌ಡಿ ನೀರು ಬೇಕು. ವಿದ್ಯುತ್‌ ಸಮಸ್ಯೆ ಹಾಗೂ ತಾಂತ್ರಿಕ ತೊಂದರೆಯಿಂದ ಈಗ ದೊರೆಯುತ್ತಿರುವುದು ಕೇವಲ 10–12 ಎಂಎಲ್‌ಡಿ ನೀರು ಮಾತ್ರ. ಹೇಮಾವತಿ ಅಣೆಕಟ್ಟೆಯಿಂದ 7 ಎಂಎಲ್‌ಡಿ, ಯಗಚಿ ಜಲಾಶಯದಿಂದ 2 ಎಂಎಲ್‌ಡಿ, ಬೋರ್‌ವೆಲ್‌ಗಳಿಂದ 1 ಎಂಎಲ್‌ಡಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಎಐಡಿಬಿ) ವತಿಯಿಂದ ಅನುಮತಿ ಪಡೆದುಕೊಂಡು ನಗರದ ಕೈಗಾರಿಕಾ ಪ್ರದೇಶಕ್ಕೆ ಹೋಗುತ್ತಿದ್ದ ನೀರಿನ ಕೊಳವೆ ಮೂಲಕ 2 ಎಂಎಲ್‌ಡಿ ನೀರು ಪಡೆಯಲಾಗುತ್ತಿದೆ.

ನಗರದ ಜನಸಂಖ್ಯೆ 1.70 ಲಕ್ಷ. ಸಮರ್ಪಕ ಮಳೆ ಇಲ್ಲದೆ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಹೀಗಾಗಿ ಜನರು ಟ್ಯಾಂಕರ್‌ ನೀರು ಅವಲಂಬಿಸು ವಂತಾಗಿದೆ. 

ಬೇಡಿಕೆಗೆ ತಕ್ಕಂತೆ ನೀರು ಸಿಗದ ಕಾರಣ ನಗರದಲ್ಲಿ 4–5 ದಿನಕ್ಕೊಮ್ಮೆ ನೀರು ಪೂರೈಸ ಲಾಗುತ್ತಿದೆ. ವಾರ್ಡ್‌ ನಂ. 4, 5, 7, 9, 10, 12, 13 ರಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಇನ್ನೂ ಹೇಮಾವತಿ ಜಲಾಶಯ ದಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಿರುವ ಮೂರು ಟ್ಯಾಂಕ್‌ಗಳ ಪೈಕಿ ಎರಡು ಬರಿದಾಗಿದೆ.

‘ಐದು ದಿನವಾದರೂ ನೀರು ಬಿಟ್ಟಿಲ್ಲ. ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಖಾಸಗಿ ಟ್ಯಾಂಕರ್‌ಗೆ  ₹ 300 ನೀಡಬೇಕು. ನಗರಸಭೆ ವತಿಯಿಂದ ಉಚಿತವಾಗಿ ನೀರು ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ’ ಎಂದು ನಿವಾಸಿ ವಿದ್ಯಾ ಹೇಳಿದರು.

‘ಸಮರ್ಪಕ ಮಳೆ ಇಲ್ಲದ ಕಾರಣ ಜಲಾಶಯಗಳು ಬರಿದಾಗುತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ಹೇಮಾವತಿ ಜಲಾಯಶದಲ್ಲಿ ₹ 77 ಲಕ್ಷ ವೆಚ್ಚದಲ್ಲಿ ತೇಲುವ ಮೋಟಾರುಗಳು (ಫ್ಲೊಟಿಂಗ್‌ ಮೋಟಾರ್‌ಗಳು) ಅಳವಡಿಸಲು ಕರ್ನಾಟಕ ನೀರು ಸರಬರಾಜು ಮಂಡಳಿಗೆ ವಹಿಸಲಾಗಿದೆ. ಕೊಳವೆ ಬಾವಿ ಕೊರೆಸಲು, ರೀ ಬೋರ್‌ ಸೇರಿದಂತೆ ಒಟ್ಟು ₹ 3.60 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ನಗರದ ಜನತೆಗೆ ಯಾವುದೇ ತೊಂದರೆ ಆಗದಂತೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ನಗರಸಭೆಗೆ ಕರೆ ಮಾಡಿದರೆ ಉಚಿತವಾಗಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್‌.ಎಸ್. ಅನಿಲ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.