ADVERTISEMENT

ಬೈರಾಪುರದಲ್ಲಿ ಸಿರಿಧಾನ್ಯಗಳಿಗೆ ಮಾರುಕಟ್ಟೆ

ಕೃಷಿ ವಿಚಾರ ಸಂಕಿರಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾಧಿಕಾರಿ ದಯಾಶೀಲಾ ವಿವರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:02 IST
Last Updated 11 ಜುಲೈ 2017, 11:02 IST

ಹಾಸನ: ‘ಸಿರಿಧಾನ್ಯಗಳ ಉತ್ಪಾದನೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ವಿಶೇಷ ಆಸಕ್ತಿ ತೋರಿದ್ದು, ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಮಾರುಕಟ್ಟೆ ವ್ಯವಸ್ಥೆಯನ್ನು ಇಲ್ಲಿಯೇ ತೆರೆಯಲು ಚಿಂತಿಸಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ಯೋಜನಾಧಿಕಾರಿ ದಯಾಶೀಲಾ ತಿಳಿಸಿದರು.

ತಾಲ್ಲೂಕಿನ ಎಚ್.ಬೈರಾಪುರ ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬೈರಾಪುರ ಹಾಲು ಉತ್ಪಾದಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಸಿರಿ ಧಾನ್ಯಗಳ ಕೃಷಿ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿರಿ ಧಾನ್ಯಗಳ ಉತ್ಪಾದನೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣವಿದ್ದು, ರೈತಾಪಿ ಮುಖಂಡರು ಈ ಕುರಿತು ಚಿಂತನೆ ನಡೆಸಬೇಕು. ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಅವಶ್ಯಕತೆ ಹೆಚ್ಚಿದೆ. ನವಣೆ, ಸಜ್ಜೆ, ರಾಗಿ, ಸಾವೆ, ಹಾರಕ, ಊದಲು ಹಾಗೂ ಜೋಳದಂತಹ ಬೆಳೆಗೆ ಪ್ರಾಮುಖ್ಯತೆ ನೀಡಬೇಕು.

ADVERTISEMENT

ಸಂಸ್ಥೆಯ ‘ಸಿರಿ’ ಗ್ರಾಮೋದ್ಯೋಗ ಯೋಜನೆ ಅಡಿಯಲ್ಲಿ ಮಾರುಕಟ್ಟೆ ಪ್ರಾರಂಭಿಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಗೌಡ ಮಾತನಾಡಿ,  ‘ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.  ಮೂಕ ಪ್ರಾಣಿಗಳ ರಕ್ಷಣೆಗೆ ಸರ್ಕಾರ ತೆರೆದ ಗೋ ಶಾಲೆಗಳಲ್ಲೂ ಸಮರ್ಪಕ ಮೇವು ಪೂರೈಕೆ ಆಗುತ್ತಿಲ್ಲ.  ಅನಕ್ಷರಸ್ಥ ರೈತರ ಬದುಕು ಚಿಂತಾಜನಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ಮಾತನಾಡಿ, ‘ಮಾನವ ಜೀವನಕ್ಕೆ ಆಹಾರ ಪದಾರ್ಥಗಳ ಅವಶ್ಯಕತೆ ಹೆಚ್ಚಿದೆ. ಇಂದು ನಾವು ಆರೋಗ್ಯದತ್ತ ಗಮನ ನೀಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ರೈತರು ಇನ್ನು ಮುಂದಾದರು ಸಿರಿ ಧಾನ್ಯ ಬೆಳೆಗೆ ಆಸಕ್ತಿ ತೋರಬೇಕು’ ಎಂದು ಕಿವಿಮಾತು ಹೇಳಿದರು.

ಗ್ರಾಮದಲ್ಲಿ ತೆರೆಯಲಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುರುಷರ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲೆ ಪತ್ರ ವಿತರಿಸಲಾಯಿತು. ಕಾರೆಕೆರೆ ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕ ಮಂಜುನಾಥ್ ಹಾಗೂ ಜಯಪ್ರಸಾದ್ ಬಳ್ಳೇಕೆರೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್, ತಾಲ್ಲೂಕು ಪಂಚಾಯಿತಿ ಸದಸ್ಯ ವೇಣುಗೋಪಾಲ್, ಎಪಿಎಂಸಿ ಮಾಜಿ ಅಧ್ಯಕ್ಷ  ವೇಣುಗೋಪಾಲ್, ಬಾಲಣ್ಣ, ಸೋಮಪ್ಪ   ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.