ADVERTISEMENT

ಮತ ಎಣಿಕೆ ಕೇಂದ್ರಗಳಿಗೆ ಡಿಸಿ ಭೇಟಿ

ವಾರದೊಳಗೆ ಸಿದ್ಧತೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿ.ರಂದೀಪ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 7:13 IST
Last Updated 20 ಏಪ್ರಿಲ್ 2018, 7:13 IST
ಹಾಸನ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಜಿಲ್ಲಾಧಿಕಾರಿ ರಂದೀಪ್ ಭೇಟಿ ನೀಡಿ ಸ್ಟ್ರಾಂಗ್ ರೂಂ, ಮತ ಏಣಿಕೆ ಕೇಂದ್ರ ಹಾಗೂ ಪೊಲೀಸ್ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದರು
ಹಾಸನ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಜಿಲ್ಲಾಧಿಕಾರಿ ರಂದೀಪ್ ಭೇಟಿ ನೀಡಿ ಸ್ಟ್ರಾಂಗ್ ರೂಂ, ಮತ ಏಣಿಕೆ ಕೇಂದ್ರ ಹಾಗೂ ಪೊಲೀಸ್ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದರು   

ಹಾಸನ: ಚುನಾವಣೆ ಹಿನ್ನೆಲೆಯಲ್ಲಿ ಮತ ಏಣಿಕೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಿ. ರಂದೀಪ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಿದ ಜಿಲ್ಲಾಧಿಕಾರಿ ರಂದೀಪ್, ಸ್ಟ್ರಾಂಗ್ ರೂಮ್, ಮತ ಏಣಿಕೆ ಕೇಂದ್ರ ಹಾಗೂ ಪೊಲೀಸ್ ಭದ್ರತಾ ಕೊಠಡಿಗಳನ್ನು ಪರಿಶೀಲಿಸಿದರು.

ನಂತರ ಸರ್ಕಾರಿ ಕಲಾ ಕಾಲೇಜಿಗೆ ತೆರಳಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರತಿಯೊಂದು ಕ್ಷೇತ್ರದ ಮತ ಎಣಿಕೆ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಎಲ್ಲಾ ಕೊಠಡಿಗಳ ನೀಲ ನಕ್ಷೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.

ADVERTISEMENT

ರಂದೀಪ್ ಮಾತನಾಡಿ, ಮತ ಎಣಿಕೆ ಕೊಠಡಿ ಹೇಗಿರಬೇಕು ಎಂಬುದರ ಬಗ್ಗೆ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಮೊದಲ ಮಹಡಿಯಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಕೊಠಡಿಗಳಲ್ಲಿ ಕಿಟಕಿ ಗಾಜುಗಳು ಹೆಚ್ಚು ಇರುವುದರಿಂದ ಅದನ್ನು ಸೀಲಿಂಗ್ ಮಾಡಬೇಕು ಹಾಗೂ ಚುನಾವಣೆ ಸಿದ್ಧತೆಗಳು ಇನ್ನೊಂದು ವಾರದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದುರು.

ಮುಂದಿನ ವಾರ ಚುನಾವಣಾ ಸಾಮಾನ್ಯ ವೀಕ್ಷಕರು ಜಿಲ್ಲೆಗೆ ಆಗಮಿಸಲಿದ್ದು, ಅಷ್ಟರೊಳಗೆ ಅಗತ್ಯವಿರುವ ಎಲ್ಲ ಸಿದ್ಧತೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತಹ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಚುನಾವಣೆ ವೇಳೆ ಯಾವುದೇ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.

ರಾಂಡಮೈಸೇಷನ್ ಪೂರ್ಣ: ಮತದಾನದ ಪ್ರಕ್ರಿಯೆಗೆ ನಿಯೋಜಿಸಲ್ಪ ಡುವ ಚುನಾವಣಾ ಸಿಬ್ಬಂದಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಂಡಮೈಸೇಷನ್ ಪ್ರಕ್ರಿಯೆ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರಂದೀಪ್ ಅವರ ಉಪಸ್ಥಿತಿಯಲ್ಲಿ ಎನ್.ಐ.ಸಿ. ಸಾಫ್ಟ್ ವೇರ್ ಬಳಸಿ ಮೊದಲ ಹಂತದ ರಾಂಡಮೈಸೇಷನ್ ನಡೆಸಲಾಯಿತು.

ಒಟ್ಟು 1978 ಮತಗಟ್ಟೆಗಳಿಗೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಶೇಕಡ 20ರಷ್ಟು ಹೆಚ್ಚುವರಿ ಸಿಬ್ಬಂದಿ ಸೇರಿಸಿ ಪ್ರಕ್ರಿಯೆ ಮಾಡಲಾಯಿತು. ಇದರಂತೆ 2378 ಪಿ.ಆರ್.ಒ., 2378 ಎ.ಪಿ.ಆರ್.ಒ., 7134 ಪಿ.ಒ. ಸೇರಿದಂತೆ ಒಟ್ಟಾರೆ 11890 ಸಿಬ್ಬಂದಿ ಆಯ್ಕೆ ಮಾಡಿಕೊಳ್ಳಲಾಯಿತು.

2ನೇ ಹಂತದ ರಾಂಡಮೈಸೇಷನ್ ನಲ್ಲಿ ಸಿಬ್ಬಂದಿಗಳಿಗೆ ಮತಗಟ್ಟೆ ನಿಯೋಜನೆ, ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನೊಳಗೊಂಡಂತೆ ಪಿಂಕ್ ಮತಗಟ್ಟೆಗಳಿಗೆ ಸಿಬ್ಬಂದಿ ಪ್ರತ್ಯೇಕಿ ಸುವುದು ಸೇರಿದಂತೆ ಇತರೆ ಪ್ರಕ್ರಿಯೆ ನಡೆಸಲಾಗುವುದು ಎಂದು ರಂದೀಪ್ ತಿಳಿಸಿದರು.

ಚೆಕ್‌ಪೋಸ್ಟ್‌ನಲ್ಲಿ ವಾಹನ ಪರಿಶೀಲನೆ

ಜಿಲ್ಲಾಧಿಕಾರಿ ರಂದೀಪ್ ಅವರು ಕೆಲವು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿ ನಡೆಸುತ್ತಿರುವ ಪ್ರಕ್ರಿಯೆಗಳ ಪರಿಶೀಲನೆ ನಡೆಸಿದರು.
ಹಳೇಬೀಡು ರಸ್ತೆ ತವರದೇವರಕೊಪ್ಪಲು ಚೆಕ್‌ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ ಅಧಿಕಾರಿಗಳು ಅವರ ವಾಹನ ತಪಾಸಣೆ ನಡೆಸಿದರು. ಕೆಲ ಕಾಲ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ, ಮಾರ್ಗ ಮಧ್ಯ ಬಂದ ವಾಹನಗಳ ತಪಾಸಣೆ ನಡೆಸಿದರು.ಮಾರುತಿ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿದ್ದ ಮೊಬೈಲ್ ಸಾಧನಗಳನ್ನು ಅಧಿಕಾರಿಗಳ ಮೂಲಕ ತೀವ್ರ ತಪಾಸಣೆಗೆ ಒಳಪಡಿಸಿದರು. ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ 28 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪೊಲೀಸ್, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಅವುಗಳ ಕಾರ್ಯ ತೃಪ್ತಿಕರವಾಗಿದೆ. ಇನ್ನಷ್ಟು ಸೂಕ್ಷ್ಮವಾಗಿ ತಪಾಸಣೆ ನಡೆಸಲು ತಿಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.