ADVERTISEMENT

ಮಹಾಕಾವ್ಯ ಕೊಡುಗೆ ಅಪಾರ

ಸಂವಾದ ಕಾರ್ಯಕ್ರಮದಲ್ಲಿ ಡಾ.ಪಾವಗಡ ಪ್ರಕಾಶರಾವ್ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:09 IST
Last Updated 27 ಮಾರ್ಚ್ 2015, 11:09 IST
ಹಾಸನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಸಹಪ್ರಾಧ್ಯಾಪಕ ಡಾ.ಎಚ್‌.ಎಲ್‌. ಮಲ್ಲೇಶಗೌಡ ಗುರುವಾರ ಚಾಲನೆ ನೀಡಿದರು. ಪ್ರೊ.ಸುಲೋಚನಾ, ಪಾವಗಡ ಪ್ರಕಾಶ್‌ ರಾವ್, ಪ್ರೊ.ಡಿ.ಜಿ. ಕೃಷ್ಣೇಗೌಡ, ಎಸ್‌.ಎಲ್‌.ಎನ್‌. ಸ್ವಾಮಿ ಇದ್ದಾರೆ
ಹಾಸನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಸಹಪ್ರಾಧ್ಯಾಪಕ ಡಾ.ಎಚ್‌.ಎಲ್‌. ಮಲ್ಲೇಶಗೌಡ ಗುರುವಾರ ಚಾಲನೆ ನೀಡಿದರು. ಪ್ರೊ.ಸುಲೋಚನಾ, ಪಾವಗಡ ಪ್ರಕಾಶ್‌ ರಾವ್, ಪ್ರೊ.ಡಿ.ಜಿ. ಕೃಷ್ಣೇಗೌಡ, ಎಸ್‌.ಎಲ್‌.ಎನ್‌. ಸ್ವಾಮಿ ಇದ್ದಾರೆ   

ಹಾಸನ: ‘ಜ್ಞಾನದೊಂದಿಗೆ ಸಂಘರ್ಷ ಆಗಾಗ ನಡೆಯುತ್ತಿರಬೇಕು. ಜ್ಞಾನ ಯಾವುದೇ ಮೂಲದಿಂದ ಬರಬ ಹುದು, ಪುರಾಣ, ಕಾವ್ಯ, ಸಂಸ್ಕೃತಿಗಳು ಭಾರತೀಯ ಜ್ಞಾನದ ತಳಹದಿಗಳಾಗಿವೆ’ ಎಂದು ಎವಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಚ್‌.ಎಲ್‌. ಮಲ್ಲೇಶಗೌಡ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಶಂಕರ ವಾಹಿನಿ ಆಶ್ರಯದಲ್ಲಿ ಗುರುವಾರ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತೀಯ ಸಂಸ್ಕೃತಿ, ಕಾವ್ಯಗಳು ಹಾಗೂ ಪುರಾಣಗಳು: ಒಂದು ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಸಜ್ಜನರ ಸಂಗ ಮಾಡಬೇಕು. ಗಂಧದೊಂದಿಗೆ ಗುದ್ದಾಡಿ ಪರಿಮಳಯುಕ್ತರಾಗಬೇಕೇ ಹೊರತು ಕ್ಷಣದ ಸುಖಕ್ಕಾಗಿ ಕೆಟ್ಟದ್ದರ ಸಹವಾಸ ಮಾಡಬಾರದು. ಕ್ಷಣದ ಮೋಜನ್ನು ನಾವು ಅತಿರಂಜನೀಯವಾಗಿ ಮೂಡಿಸು ತ್ತಿದ್ದೇವೆ. ಇದು ಅಪಾಯಕಾರಿ ಬೆಳವಣಿಗೆ. ಭಾರತೀಯ ಮಹಾಕಾವ್ಯ ಗಳು ಜಗತ್ತಿಗೆ ವಿಜ್ಞಾನ ಹಾಗೂ ದರ್ಶನ ಮೂಡಿಸಿವೆ. ಈ ನಿಟ್ಟಿನಲ್ಲಿ ನಾವು ಪುರಾಣ ಹಾಗೂ ಮಹಾಕಾವ್ಯ ಅರ್ಥೈಸಿ ಕೊಂಡಿಲ್ಲ. ಹೀಗಾಗಿ ವಾಸ್ತವದ ನೆಲೆಯಲ್ಲಿ ಪುರಾಣ ಹಾಗೂ ಮಹಾ ಕಾವ್ಯಗಳ ಅನ್ವೇಷಣೆ ನಡೆಯಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನದ ಬಾಹು ವಿಸ್ತರಿಸಿಕೊಳ್ಳಬೇಕು’ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಪಾವಗಡ ಪ್ರಕಾಶರಾವ್, ಭಗವದ್ಗೀತೆ, ವೇದ, ಪುರಾಣ, ಮಹಾಕಾವ್ಯಗಳ ಆಧಾರಿತ ಜ್ಞಾನದ ಶಾಖೆ ಪರಿಚಯಿಸಿದರು.

‘ಭಾರತೀಯ ಆಧ್ಯಾತ್ಮಿಕ ಸಂದರ್ಭಕ್ಕೆ ಮಹಾಕಾವ್ಯ, ಪುರಾಣ, ವೇದಗಳ ಕೊಡುಗೆ ಅಪಾರ. ಭಾರತೀಯ ಸಂಸ್ಕೃತಿ ಸುಭದ್ರವಾಗಿರಲು ನಮ್ಮ ಪ್ರಾಚೀನ ಪುರಾಣಗಳು, ಮಹಾಕಾವ್ಯಗಳು ಕಾರಣ. ಆದರೆ, ಅದನ್ನು ಗ್ರಹಿಸುವ ಅಧ್ಯಯನ ಶೀಲತೆ ಬಹಳ ಮುಖ್ಯ. ಆಳವಾದ ಅಧ್ಯಯನದಿಂದ ಮಾತ್ರ ನಮ್ಮ ಪ್ರಾಚೀನ ಮೌಲ್ಯ ಅರ್ಥೈಸಿಕೊಳ್ಳಲು ಸಾಧ್ಯ’ ಎಂದರು.

ಹೊಳೆನರಸೀಪುರ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುಲೋಚನಾ ಎಚ್.ಆರ್.  ಮುಖ್ಯ ಅತಿಥಿಯಾಗಿದ್ದರು.   ಶಂಕರ ವಾಹಿನಿಯ ಸೃಜನಶೀಲ ವಿಭಾಗ ಮುಖ್ಯಸ್ಥ ಎಸ್ಎಲ್ಎನ್ ಸ್ವಾಮಿ  ಮಾತನಾಡಿ ದರು.  ಪ್ರಾಂಶುಪಾಲ ಪ್ರೊ.ಡಿ.ಜಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವೈ.ಪಿ. ಮಲ್ಲೇಗೌಡ ನಿರೂಪಿಸಿದರು. ಬಿ.ಆರ್. ರಮೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.