ADVERTISEMENT

‘ಮಾಸ್ಟರ್‌ ಪ್ಲಾನ್‌’ ಕರಡು ನಕ್ಷೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:06 IST
Last Updated 31 ಜನವರಿ 2017, 7:06 IST

ಬೇಲೂರು: ಪಟ್ಟಣಕ್ಕೆ ಸಂಬಂಧಿಸಿ ಬೇಲೂರು–ಹಳೇಬೀಡು ಯೋಜನಾ ಪ್ರಾಧಿಕಾರ ರೂಪಿಸಿರುವ ಮಹಾಯೋಜನೆ (ಮಾಸ್ಟರ್‌ ಪ್ಲಾನ್‌) ಕರಡು ನಕ್ಷೆಯನ್ನು ಪುರಸಭಾ ಅಧ್ಯಕ್ಷೆ ಕೆ.ಎಸ್‌.ಉಮಾ (ಮುದ್ದಮ್ಮ) ಸೋಮವಾರ ಬಿಡುಗಡೆ ಮಾಡಿದರು.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕರಡು ನಕ್ಷೆ ಬಿಡುಗಡೆ ಮಾಡಿದ ಅವರು, ಇದರಲ್ಲಿನ ಲೋಪ ದೋಷಗಳ ಬಗ್ಗೆ ಸದಸ್ಯರು ಮತ್ತು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎ.ಜಮಾಲುದ್ದೀನ್‌ ಅವರು, ‘ಮಹಾ ಯೋಜನಾ ನಕ್ಷೆಯಿಂದ ಸಾರ್ವಜನಿಕರಿಗೆ ಅನುಕೂಲ. ರಸ್ತೆ, ಉದ್ಯಾನವನ, ಸಿ.ಎ. ಭೂಮಿ, ವಾಣಿಜ್ಯ ಸ್ಥಳಗಳು, ವಾಸದ ಸ್ಥಳಗಳನ್ನು ಗುರುತು ಮಾಡಲು ಸಹಕಾರಿ ಆಗಲಿದೆ’ ಎಂದು ಹೇಳಿದರು.

ಪುರಸಭಾ ಸದಸ್ಯ ಜಿ.ಶಾಂತ ಕುಮಾರ್‌, ‘ಬೇಲೂರು–ಹಳೇಬೀಡು ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ 9 ಗ್ರಾ.ಪಂ. ಮತ್ತು ಬೇಲೂರು ಪುರಸಭೆ ಸೇರಿ 8133 ಹೆಕ್ಟೇರ್‌ ಪ್ರದೇಶ ಸೇರ್ಪಡೆಯಾಗಿದೆ. ಬೇಲೂರು ಪಟ್ಟಣದ 23 ವಾರ್ಡ್‌ಗಳಿಗೆ ಸಂಬಂಧಿಸಿದ ಮಹಾ ಯೋಜನಾ ನಕ್ಷೆ ರೂಪಿಸಲಾಗಿದೆ. ಪಟ್ಟಣ ಅಭಿವೃದ್ಧಿಯ ದೃಷ್ಟಿಯಿಂದ ನಕ್ಷೆ ಅಗತ್ಯವಾಗಿದೆ’ ಎಂದರು.

ನಕ್ಷೆ ಪ್ರಕಾರ ಪಟ್ಟಣದಲ್ಲಿ ಹಾದು ಹೋಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯ ಭಾಗದಿಂದ 21 ಮೀಟರ್‌ ಮತ್ತು ಜಿಲ್ಲಾ ರಸ್ತೆಗಳಲ್ಲಿ 13 ಮೀಟರ್‌ಗೆ ಪ್ರಾಧಿಕಾರ ಮತ್ತು ಪುರಸಭೆ ಕಟ್ಟಡ ಕಟ್ಟಲು ಅನುಮತಿ ನೀಡುವುದಿಲ್ಲ’ ಎಂದು ತಿಳಿಸಿದರು.

ನೀರಿನ ತೆರಿಗೆ ಹೆಚ್ಚಳ: ಬೇಲೂರು ಪುರಸಭೆ ವ್ಯಾಪ್ತಿಯಲ್ಲಿನ ಮನೆಗಳ ನೀರಿನ ತೆರಿಗೆಯನ್ನು ಮಾಸಿಕ ₹ 80 ರಿಂದ ₹ 100ಕ್ಕೆ ಹೆಚ್ಚಿಸಲು ಸಭೆ ನಿರ್ಣಯ ಕೈಗೊಂಡಿತು.
ಮುಖ್ಯಾಧಿಕಾರಿ ಬಿ.ಸಿ. ಬಸವರಾಜು ಅವರು, ಸರ್ಕಾರದ ನಿರ್ದೇಶನದ ಪ್ರಕಾರ ನೀರಿನ ತೆರಿಗೆ ಮತ್ತು ಒಳಚರಂಡಿ ಸಂಪರ್ಕ ಶುಲ್ಕ ಹೆಚ್ಚಿಸಬೇಕಾಗಿದೆ. ಈ ಬಗ್ಗೆ ಸಭೆ ನಿರ್ಣಯ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸದಸ್ಯ ಬಿ.ಡಿ.ಚನ್ನಕೇಶವ, ‘ಬರಗಾಲದ ಸ್ಥಿತಿಯಲ್ಲಿ ನೀರಿನ ತೆರಿಗೆಯನ್ನು ಹೆಚ್ಚಿಸುವುದು ಬೇಡ ₹ 20 ಮಾತ್ರ ಹೆಚ್ಚಿಸಿ’ ಎಂದು ಸೂಚಿಸಿದರು. ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌, ‘ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ನೀರಿನ ತೆರಿಗೆಯನ್ನು ಅನಿವಾರ್ಯವಾಗಿ ಹೆಚ್ಚಳ ಮಾಡ
ಬೇಕಾಗಿದೆ’ ಎಂದರು.

ಗೃಹೋಪಯೋಗಿ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ಶುಲ್ಕ ವಿಧಿಸಲು ಮತ್ತು ಒಂದೇ ಕಟ್ಟಡದಲ್ಲಿ ಮೂರು ನಾಲ್ಕು ಮನೆಗಳಿದ್ದರೆ,  ಎಲ್ಲ ಮನೆಗಳಿಗೆ ಪ್ರತ್ಯೇಕವಾಗಿ ನೀರಿನ ತೆರಿಗೆ ವಸೂಲಿ ಮಾಡಲು ಸಭೆ ನಿರ್ಣಯಿಸಿತು. ಉಪಾಧ್ಯಕ್ಷ ಅರುಣ್‌ಕುಮಾರ್‌, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.