ADVERTISEMENT

ಮಿಶ್ರ ಬೆಳೆಯಿಂದ ಲಾಭ ಗಳಿಸಿದ ರೈತ

ಸಂತೆ ಶಿವರ ಗ್ರಾಮದ ಕೃಷಿಕ ಬಸವರಾಜು ಅವರ ಯಶಸ್ಸಿನ ಗಾಥೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:53 IST
Last Updated 20 ಮೇ 2018, 13:53 IST
ಸಂತೆ ಶಿವರ ಗ್ರಾಮದ ಬಸವರಾಜು ಅವರ ತೋಟದಲ್ಲಿನ ತೆಂಗು, ಅಡಿಕೆ, ಬಾಳೆ
ಸಂತೆ ಶಿವರ ಗ್ರಾಮದ ಬಸವರಾಜು ಅವರ ತೋಟದಲ್ಲಿನ ತೆಂಗು, ಅಡಿಕೆ, ಬಾಳೆ   

ಚನ್ನರಾಯಪಟ್ಟಣ: ಕೃಷಿ ಲಾಭದಾಯಕ ವಲ್ಲ ಎಂಬ ಭಾವನೆ ರೈತರಲ್ಲಿದೆ. ಆದರೆ, ಸಾವಯವ ಕೃಷಿ ಪದ್ಧತಿ ಅನುಸರಿಸಿ ಮಿಶ್ರ ಬೆಳೆಗಳಿಂದಾಗಿ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ತಾಲ್ಲೂಕಿನ ಸಂತೆ ಶಿವರ ಗ್ರಾಮದ ರೈತ ಬಿ.ಬಸವರಾಜು.

ಬಸವರಾಜು ಆರು ಎಕರೆ ಭೂಮಿ ಹೊಂದಿದ್ದು, ಅದರಲ್ಲಿ ಅಡಿಕೆ, ತೆಂಗು, ಬಾಳೆ, ಸಪೋಟ, ಮಾವು, ರಾಮಫಲ, ಸೀತಾಫಲ, ಗೋಡಂಬಿ, ಬೆಟ್ಟದ ನೆಲ್ಲಿಕಾಯಿ, ನಿಂಬೆ, ವೀಳ್ಯದೆಲೆ, ಮೆಣಸು ಬೆಳೆದಿದ್ದಾರೆ. ತೇಗ, ಸಿಲ್ವರ್, ಬೇವು, ಹೊಂಗೆ ಹಾಗೂ ಅಂಟ್ವಾಳ ಮರಗಳನ್ನೂ ಬೆಳೆಸಿದ್ದಾರೆ. ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.

ಬಿ.ಎಸ್ಸಿ ಪದವೀಧರರಾದ ಇವರು, ಸರ್ಕಾರಿ ನೌಕರಿ ತೊರೆದು 1980ರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

‘ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ವೆಚ್ಚವೂ ಹೆಚ್ಚು. ಆದರೆ, ಸಾವಯವ ಕೃಷಿ ಪದ್ಧತಿ ಅನುಸರಿಸುವುದರಿಂದ ಖರ್ಚು ಕಡಿಮೆ, ಇಳುವರಿ ಹೆಚ್ಚು. ಅಲ್ಲದೆ, ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಆರು ಎಕರೆ ಭೂಮಿಗೂ ಜೀವಾಮೃತ, ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಿದ್ದೇನೆ’ ಎಂದು ಬಸವರಾಜು ತಿಳಿಸಿದರು.

‘60 ಚದರಡಿ ವಿಸ್ತೀರ್ಣದಲ್ಲಿ ಹಳ್ಳ ತೋಡಿ ಅದರಲ್ಲಿ ತೆಂಗು, ಅಡಿಕೆ, ಬಾಳೆ ಎಲೆಗಳನ್ನು ಹಾಕಿ ಸಾವಯವ ಗೊಬ್ಬರ ತಯಾರಿಸುತ್ತಿದ್ದೇನೆ. ಇಡೀ ಭೂಮಿಯಲ್ಲಿ ಬಿದ್ದ ಮಳೆ ನೀರು ಇಂಗುವುದಕ್ಕಾಗಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಹೀಗಾಗಿ, ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ’ ಎಂದರು.

‘ಒಂದೇ ಬೆಳೆ ಬೆಳೆದು ಅದಕ್ಕೆ ಬೆಲೆ ಸಿಗದಿದ್ದರೆ ನಷ್ಟವಾಗುತ್ತದೆ. ಆದರೆ, ಮಿಶ್ರ ಬೆಳೆಯಿಂದ ಯಾವುದಾದರೂ ಒಂದು ಬೆಳೆಗೆ ಬೆಲೆ ಸಿಗುತ್ತದೆ. ಇವುಗಳ ಜತೆಗೆ ತೇಗ, ಸಿಲ್ವರ್, ಬೇವು, ಅಂಟ್ವಾಳ ಮರಗಳನ್ನೂ ಬೆಳೆಯಬೇಕು. ಇದರಿಂದ ಹೆಚ್ಚಿನ ಆದಾಯ ಗಳಿಸಬಹುದು’ ಎಂದರು.

ರಾಜ್ಯ ಸರ್ಕಾರದ ವೈಜ್ಞಾನಿಕ ಬೆಲೆ ನಿಗದಿ ಸಮಿತಿ, ಸಾವಯವ ಕೃಷಿ ಸಮಿತಿಗೆ ಬಸವರಾಜು ಸದಸ್ಯರಾಗಿದ್ದಾರೆ. ರಾಜ್ಯದ ವಿವಿಧೆಡೆ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದ್ದಾರೆ.

ರಾಜ್ಯ ಸರ್ಕಾರ ನೀಡುವ ಕೃಷಿ ಪಂಡಿತ್‌ ಪ್ರಶಸ್ತಿ, ಸೃಷ್ಟಿ ಪ್ರಶಸ್ತಿ, ಜಿ.ಮಾದೇಗೌಡ ಪ್ರಶಸ್ತಿ ಸೇರಿದಂತೆ ಸಂಘ, ಸಂಸ್ಥೆಗಳ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

**
ಕೃಷಿಯೂ ಒಂದು ವಿಜ್ಞಾನವಾಗಿದ್ದು, ಯೋಜನಾ ಬದ್ಧವಾಗಿ ಬೆಳೆಗಳನ್ನು ಬೆಳೆಯಬೇಕು. ಆಗ, ಕೃಷಿ ಲಾಭದಾಯಕವಾಗುತ್ತದೆ
ಬಿ.ಬಸವರಾಜು, ಕೃಷಿಕ 

ಸಿದ್ದರಾಜು ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.