ADVERTISEMENT

ಮುಂದುವರಿದ ಮುಷ್ಕರ: ತಪ್ಪದ ಗೋಳು

ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:39 IST
Last Updated 5 ಜನವರಿ 2017, 9:39 IST

ಹಾಸನ: ಕರ್ತವ್ಯ ನಿರತ ವೈದ್ಯರ ಮೇಲೆ ಡಿ. 31ರ ರಾತ್ರಿ ನಡೆದ ಹಲ್ಲೆಯನ್ನು ಖಂಡಿಸಿ ಗೃಹ ವೈದ್ಯರು ನಡೆಸುತ್ತಿರುವ ಮುಷ್ಕರ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇದರಿಂದಾಗಿ ಅಗತ್ಯ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುವಂತಾಗಿದೆ.

ವೈದ್ಯರಿಗೆ ಭದ್ರತೆ ಹಾಗೂ ಹಲ್ಲೆ ನಡೆಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದ ಗೃಹ ವೈದ್ಯರು, ಕಪ್ಪುಪಟ್ಟಿ ಧರಿಸಿ ಮುಷ್ಕರ ನಡೆಸುತ್ತಿದ್ದಾರೆ.

ತುರ್ತುಚಿಕಿತ್ಸಾ ವಿಭಾಗದಲ್ಲಿ ತೊಂದರೆ ಆಗದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಇತರೆ ವಿಭಾಗಗಳಲ್ಲಿ ಗೃಹ ವೈದ್ಯರ ಸೇವೆ ಲಭ್ಯ ಇಲ್ಲದೆ ಹಿರಿಯ ವೈದ್ಯರೇ ಎಲ್ಲ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಕೆಲವು ವಿಭಾಗಗಳ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.

‘ಜ್ವರ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಆದರೆ, ಚಿಕಿತ್ಸೆ ನೀಡಲು ವೈದ್ಯರು ಬರುತ್ತಿಲ್ಲ’ ಎಂದು ಶಾಂತಿ ಗ್ರಾಮದ ನಿವಾಸಿ ಪ್ರಸನ್ನ ಅಳಲು ತೋಡಿಕೊಂಡರು.

ಈ ನಡುವೆ ಆಡಳಿತ ಮಂಡಳಿಯು ಕಿರಿಯ ವೈದ್ಯರ ಜತೆ ಚರ್ಚೆ ನಡೆಸಿದ್ದು, ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದೆ. ಗುರುವಾರದಿಂದ ಮುಷ್ಕರ ಕೈ ಬಿಟ್ಟು, ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಘಟನೆಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ದೂರು ನೀಡಲಾಗಿದೆ. ಆದರೆ, ಪೊಲೀಸರು ಐದು ಮಂದಿಯನ್ನು ಬಂಧಿಸಿದರು. ಅವರಿಗೂ ಜಾಮೀನು ದೊರೆತಿದೆ.  ಇಷ್ಟು ಬೇಗ ಜಾಮೀನು ಸಿಗುವುದಾದರೆ ಮಾಡಿದ ತಪ್ಪಿಗೆ ಶಿಕ್ಷೆ ಏನು ಕೊಟ್ಟಂತಾಯಿತು’ ಎಂದು ವೈದ್ಯಕೀಯ ವಿದ್ಯಾರ್ಥಿ ಮಂಜುನಾಥ್ ಪ್ರಶ್ನಿಸಿದರು.

ಬುಧವಾರ ಮಧ್ಯಾಹ್ನ ಕಾಲೇಜು ಆವರಣದಿಂದ ಆರ್‌.ಸಿ. ರಸ್ತೆ ಮಾರ್ಗವಾಗಿ ಮೆರವಣಿಗೆ ಪ್ರಾರಂಭಿಸಿದ ಕಿರಿಯ ವೈದ್ಯರು ಎನ್.ಆರ್. ವೃತ್ತ, ಹೇಮಾವತಿ ಪ್ರತಿಮೆ ಮೂಲಕ ಸಾಗಿ ಕಾಲೇಜಿನಲ್ಲಿ ಅಂತ್ಯಗೊಳಿಸಿದರು.

‘ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಮುಂಭಾಗದಲ್ಲಿ  ಇಬ್ಬರು ಗಾರ್ಡ್‌ಗಳನ್ನು ಮಾತ್ರ ನೇಮಕ ಮಾಡಲಾಗಿತ್ತು. ಆದರೆ, ಈಗ ಅವರ ಸಂಖ್ಯೆ ನಾಲ್ಕಕ್ಕೇರಿದೆ. ಕೊಠಡಿಯೊಳಗೆ ರೋಗಿಗಳು ಒಬ್ಬೊಬ್ಬರಾಗಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ 90 ಮಂದಿ ಗೃಹ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಜೀವ ರಕ್ಷಣೆಗಾಗಿ ಕೆಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ಅವರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.