ADVERTISEMENT

ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 6:58 IST
Last Updated 5 ನವೆಂಬರ್ 2017, 6:58 IST

ಅರಸೀಕೆರೆ: ‘ಮುಂಗಾರು ಬೆಳೆ ಸಮೀಕ್ಷೆಗೆ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ತಾಲ್ಲೂಕಿನಲ್ಲಿ ಮೊಬೈಲ್‌ ಆ್ಯಪ್‌ ಬಳಕೆ ಮಾಡಿ ಸಮೀಕ್ಷೆ ನಡೆಸುತ್ತಿದ್ದೇವೆ’ ಎಂದು ತಹಶೀಲ್ದಾರ್‌ ಎನ್‌.ವಿ.ನಟೇಶ್‌ ಶನಿವಾರ ತಿಳಿಸಿದರು. ತಾಲ್ಲೂಕಿನ ಕಣಕಟ್ಟೆ ಹೋಬಳಿ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ತಹಶೀಲ್ದಾರ್‌ ನೇತೃತ್ವದ ತಂಡ ಭೇಟಿ ನೀಡಿ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸಿತು.

ಈ ಸಂದರ್ಭದಲ್ಲಿ ರೈತರ ಜೊತೆಗೆ ಮಾತನಾಡಿದ ಅವರು, ‘ಬೆಳೆ ಸಮೀಕ್ಷೆ ಹಾಗೂ ಬೆಳೆ ನಷ್ಟ ಸಮೀಕ್ಷೆ ಎಂದು ಎರಡು ವಿಧಾನಗಳಲ್ಲಿ ಬೆಳೆ ಹಾನಿಯ ಪರಿಶೀಲನೆ ನಡೆದಿದೆ. ಯಾವ ರೈತರು ಆತಂಕಪಡಬೇಕಾಗಿಲ್ಲ’ ಎಂದು ಹೇಳಿದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಎನ್‌.ವಿ.ನಟೇಶ್‌, ‘ಸಮೀಕ್ಷೆಯ ಪ್ರಥಮ ಹಂತದಲ್ಲಿ ಸರ್ವೆ ನಂಬರ್‌, ಆಧಾರ ಸಂಖ್ಯೆ, ಮೊಬೈಲ್‌ ನಂಬರ್‌, ರೈತರ ಹೆಸರು ಮತ್ತು ಜಮೀನಿನ ಛಾಯಾ ಚಿತ್ರವನ್ನು ತಂತ್ರಾಂಶದಲ್ಲಿ ಶೇಖರಿಸಲಾಗುವುದು’ ಎಂದರು.

‘ಪಹಣಿಯನ್ನು ಕೈಯಲ್ಲಿ ಬರೆಯುವ ಕಾರ್ಯ ಇರುವುದಿಲ್ಲ. ಮುಂದಿನ ಹಂತದಲ್ಲಿ ಆಧಾರ್‌ ಸಂಖ್ಯೆ ಪರಿಶೀಲನೆ ನಡೆಯಲಿದೆ. ಬೆಳೆ ಸಮೀಕ್ಷೆ ಮಹತ್ವ ಪೂರ್ಣ ಕಾರ್ಯಕ್ರಮ. ಇದರಿಂದ ಬೆಳೆಹಾನಿ ಸಂಭವಿಸಿದ ವೇಳೆ ವ್ಯಾಪ್ತಿ ಇತ್ಯಾದಿಗಳ ಕುರಿತು ನಿಖರ ಮಾಹಿತಿ ಸುಲಭದಲ್ಲಿ ದೊರೆಯಲಿದೆ’ ಎಂದು ವಿವರಿಸಿದರು.

ADVERTISEMENT

ಸಾಮಾನ್ಯವಾಗಿ ಬೆಳೆ ಇರುವ ಕ್ಷೇತ್ರದ ಮೂಲ ಮಾಹಿತಿ ಗ್ರಾಮ ಲೆಕ್ಕಾಧಿಕಾರಿ ನೀಡುವ ಅಂಕಿ–ಅಂಶ ಆಧರಿಸಿರುತ್ತದೆ. ಹೀಗಾಗಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಆಗುತ್ತಿತ್ತು. ಇದನ್ನು ತಪ್ಪಿಸಲು ಮತ್ತು ಜಮೀನಿಗೆ ಭೇಟಿ ನೀಡಿ ಬೆಳೆ ವಿವರ ದಾಖಲಿಸಲು ಈ ತಂತ್ರಾಂಶ ನೆರವಾಗಲಿದೆ ಎಂದರು.

ಮೊಬೈಲ್‌ ಆ್ಯಪ್‌ ಮೂಲಕ ಪ್ರತಿದಿನ ಒಬ್ಬ ಸರ್ವೆ ಅಧಿಕಾರಿ ಸರಾಸರಿ 100 ರೈತರ ಜಮೀನಿನ ಸಮೀಕ್ಷೆ ಪೂರ್ಣಗೊಳಿಸಲಿದ್ದಾನೆ. ಇದರಿಂದ ಬೆಳೆ ಹಾನಿಯ ನೈಜ ಚಿತ್ರಣ ಸರ್ಕಾರಕ್ಕೆ ಲಭಿಸುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸಮೀಕ್ಷೆ ಮಂದಗತಿಯಲ್ಲಿ ಸಾಗಿದೆ’ ಎಂದರು.

4ನೇ ಸ್ಥಾನ: ಬೆಳೆ ಸಮೀಕ್ಷೆ ಕಾರ್ಯದಲ್ಲಿ ತಾಲ್ಲೂಕು 4ನೇ ಸ್ಥಾನದಲ್ಲಿದೆ. ಸಮೀಕ್ಷೆ ತ್ವರಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಮೀಕ್ಷೆಗೆ 109 ಮಂದಿಯನ್ನು ನಿಯೋಜಿಸಿದ್ದು, 369 ಗ್ರಾಮ ವ್ಯಾಪ್ತಿಯಲ್ಲಿ 2,28465ಎಕರೆಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದು ಶೇ 41ಪ್ರಗತಿಯಾಗಿದೆ ಎಂದು ಹೇಳಿದರು.

ಬೆಳೆ ಸಮೀಕ್ಷೆ ಪ್ರಗತಿ ಮಂದಗತಿಯಲ್ಲಿರುವ ಕಡೆಗೆ ಜಿಲ್ಲಾಧಿಕಾರಿ ಅವರೂ ಭೇಟಿನೀಡಿ ಪರಿಶೀಲಿಸುವ ಸಾಧ್ಯತೆ ಇದೆ ಎಂದರು. ಕಂದಾಯ ಅಧಿಕಾರಿಗಳಾದ ಮೋಹನ್‌ ಕುಮಾರ್‌, ಕೊಟ್ರೇಶ್‌ ರೈತರಾದ ನಂಜಪ್ಪ, ಕೊಟ್ಟೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.