ADVERTISEMENT

ಮೋಡದ ಮುಸುಕಿನಲ್ಲಿ ‘ಹೊಯ್ಸಳ’ ವೈಭವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:27 IST
Last Updated 9 ನವೆಂಬರ್ 2017, 6:27 IST

ಹಳೇಬೀಡು: ಐತಿಹಾಸಿಕ ಹೊಯ್ಸಳೇಶ್ವರ ರಥೋತ್ಸವ ಪಟ್ಟಣದಲ್ಲಿ ಬುಧವಾರ ಸಡಗರದಿಂದ ನರೆಯಿತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಹರಿದುಬಂದರು. ಇಡೀ ದಿನ ಮೋಡ ಕವಿದ ವಾತಾವರಣ ಇದ್ದುದರಿಂದ ಜಾತ್ರೆಗೆ ಬಂದವರ ಹುಮ್ಮಸ್ಸು ಇನ್ನಷ್ಟು ಹೆಚ್ಚಿತು.

ಗರ್ಭಗುಡಿಯಲ್ಲಿ ಮುಂಜಾನೆ ಯಿಂದಲೇ ವೇದಮಂತ್ರ ಘೋಷ ಮೊಳಗಿದವು. ಗರ್ಭಗುಡಿಯ ಹೊಯ್ಸಳೇಶ್ವರ ಲಿಂಗಕ್ಕೆ ಶತರುದ್ರಾಭಿಷೇಕ ನರೆವೇರಿಸಲಾಯಿತು. ನಂತರ ನಾಗಾಭರಣ ಧರಿಸಿ ವಿವಿಧ ಹೂವುಗಳಿಂದ ಅಲಂಕರಿಸಲಾಯಿತು. ಮಹಾಮಂಗಳಾರತಿ ನೆರವೇರಿಸಿದ ನಂತರ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು.

ಬಾಣಾವರ ತಂಡದ ಮಂಗಳ ವಾದ್ಯದೊಂದಿಗೆ ಪಲ್ಲಕ್ಕಿಯಲ್ಲಿ ಕರೆತಂದು ಉತ್ಸವಮೂರ್ತಿಗಳನ್ನು ವಿಧಿವತ್ತಾಗಿ ರಥದಲ್ಲಿ ಆರೋಹಣ ಮಾಡಲಾಯಿತು. ಶಿವನಾಮ ಸ್ಮರಣೆಯೊಂದಿಗೆ ಭಕ್ತರು ಜಯಘೋಷ ಹಾಕದರು.

ADVERTISEMENT

ಪೂಜಾ ವಿಧಾನ ನೆರವೇರಿಸಿದ ನಂತರ ವಿಶ್ವಕರ್ಮ ಸಮಾಜದವರು ಕದಳಿ ಬಲಿ ಅರ್ಪಿಸಿದರು. ಪುಷ್ಪಗಿರಿಯ ಸೋಮಶೇಖರ ಸ್ವಾಮೀಜಿ, ತಹಶೀಲ್ದಾರ್‌ ಪರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಹೊಯ್ಸಳೇಶ್ವರ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ಬಿಜೆಪಿ ಮುಖಂಡ ಹುಲ್ಲಳ್ಳಿ ಸುರೇಶ್‌ ಮೊದಲಾದ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ನೂಕುನುಗ್ಗಲಿನಲ್ಲಿಯೇ ರಥ ಎಳೆದರು.

ರಥೋತ್ಸವ ಹೊಯ್ಸಳ ವೃತ್ತದ ಮುಖಾಂತರ ದೇವಾಸ್ಥಾನ ರಸ್ತೆಯಲ್ಲಿ ಸಾಗಿತು. ಕರಿಯಮ್ಮ ಮಹಾದ್ವಾರ ವೃತ್ತದಿಂದ ಹಿಂದುರುಗಿದ ರಥ ದೇವಾಲಯದ ಮುಂದೆ ಬಂದು ನಿಂತಿತು. ಉತ್ಸವ ಮುಗಿದರು ಭಕ್ತರು ಮುಗಿಬಿದ್ದು ಹಣ್ಣು– ಕಾಯಿ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.

ತರಿಕೆರೆಯ ಭದ್ರಕಾಳಿ ತಂಡದ ಮಹಿಳಾ ವೀರಗಾಸೆ, ಅಮ್ಮನಬ್ಯಾಡರಳ್ಳಿ ಕೊಲ್ಲಪುರದಮ್ಮ, ಚಾಮುಂಡೇಶ್ವರಿ ತಂಡದ ಮಹಿಳಾ ವೀರಗಾಸೆ, ಬಿರೂರಿನ ದುರ್ಗಮ್ಮ ತಂಡದ ಗೊಂಬೆ ಕುಣಿತ ಮೆರವಣಿಗೆ ಕಳೆ ಕಟ್ಟಿದವು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.