ADVERTISEMENT

ಯೋಜನೆ ಪ್ರಚಾರಕ್ಕೆ ಡಿಜಿಟಲ್‌ ಸ್ಪರ್ಶ

ಕೆ.ಎಸ್.ಸುನಿಲ್
Published 13 ನವೆಂಬರ್ 2017, 6:55 IST
Last Updated 13 ನವೆಂಬರ್ 2017, 6:55 IST

ಹಾಸನ: ಯೋಜನೆ ಹಾಗೂ ಸಾಧನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಡಿಜಿಟಲ್‌ ಡಿಸ್‌ಪ್ಲೇ ಫಲಕಗಳನ್ನು ಅಳವಡಿಸಿದೆ. ಈ ಹಿಂದೆ ಬ್ಯಾನರ್‌ ಮತ್ತು ಫ್ಲೆಕ್ಸ್‌ ಗಳನ್ನು ಪ್ರಮುಖ ಸ್ಥಳಗಳಲ್ಲಿ ಹಾಕುವ ಮೂಲಕ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡಲಾಗುತ್ತಿತ್ತು. ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಕಾರಣ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಡಿಜಿಟಲ್‌ ಡಿಸ್‌ಪ್ಲೇ ಫಲಕ ಅಳವಡಿಸುವ ಕಾರ್ಯ ಕೈಗೆತ್ತಿಗೊಂಡಿದೆ.

ನಗರದ ಮಹಾವೀರ ವೃತ್ತದ ಬಳಿ ಗ್ರಂಥಾಲಯದ ಆವರಣದಲ್ಲಿ ₹ 35 ಲಕ್ಷ ವೆಚ್ಚದಲ್ಲಿ ಡಿಸ್‌ಪ್ಲೇ ಫಲಕ ಹಾಕಲಾಗಿದ್ದು, ಇದು ದಿನದ 24 ತಾಸು ಕಾರ್ಯ ನಿರ್ವಹಿಸಲಿದೆ. ಬೆಂಗಳೂರಿನ ಜೇಂಕಾರ್‌ ಜಾಹೀರಾತು ಕಂಪೆನಿಗೆ ವರ್ಷದ ಅವಧಿಗೆ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಬೆಂಗಳೂರಿನಿಂದ ಡಿಜಿಟಲ್‌ ಕಂಟ್ರೋಲ್‌ ಮೂಲಕ ನಿಯಂ ತ್ರಿಸಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ತಂತ್ರಜ್ಞರೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಡಿಜಿಟಲ್‌ ಡಿಸ್‌ಪ್ಲೇ ಫಲಕ ಮಂಜೂರಾಗಿದ್ದು, ಸದ್ಯ 10 ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ. ಪ್ರಸ್ತುತ ಫಲಕದಲ್ಲಿ ಸರ್ಕಾರದ ಯೋಜನೆಗಳು, ಸಾಧನೆ, ಸೌಲಭ್ಯಗಳ ಜತೆಗೆ ಸ್ವಚ್ಛತೆ, ನೀರಿನ ಸಂರಕ್ಷಣೆ ಹಾಗೂ ಸಾಂಕ್ರಾಮಿಕ ಕಾಯಿಲೆ ತಡೆಯಲು ಮುಂಜಾಗ್ರತೆಯ ಬಗ್ಗೆ ಸಲಹೆ ನೀಡಲಾಗುತ್ತಿದೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಹಾಗೂ ಶ್ರವಣಬೆಳಗೊಳದಲ್ಲಿ ಜರುಗುವ ಮಹಾಮಸ್ತಕಾಭಿಷೇಕ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ.

ADVERTISEMENT

‘ಹೊಸ ತಂತ್ರಜ್ಞಾನ ಪ್ರಥಮವಾಗಿ ಜಿಲ್ಲೆಗೆ ಬಂದಿರುವುದರಿಂದ ಜನರಲ್ಲಿ ಕುತೂಹಲ ಹೆಚ್ಚಿಸಿದೆ. ಜಿಲ್ಲಾ ಕೇಂದ್ರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತರೆ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಪ್ರಸ್ತುತ ಸರ್ಕಾರಿ ಯೋಜನೆಗಳನ್ನು ಮಾತ್ರ ಬಿತ್ತರ ಮಾಡುತ್ತಿದ್ದು, ಖಾಸಗಿ ಜಾಹೀರಾತು ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮುಂದೆ ತೀರ್ಮಾನಿಸಲಾಗುತ್ತದೆ’ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಅಧಿಕಾರಿ ವಿನೋದ್‌ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು

‘ವಿವಿಧ ಯೋಜನೆಗಳ ವಿಡಿಯೊ ಜತೆಗೆ ಧ್ವನಿ ಕೇಳುವ ಅವಕಾಶ ಕಲ್ಪಿಸಲಾಗಿದೆ. ಆದರೆ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಶಬ್ದರಹಿತ ವಿಡಿಯೊ ಮಾತ್ರ ಪ್ರದರ್ಶಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.