ADVERTISEMENT

ಯೋಜನೆ ರೂಪಿಸದೆ ಕಾಮಗಾರಿ ಅನುಷ್ಠಾನ

ಅರಕಲಗೂಡು; ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:31 IST
Last Updated 8 ಮಾರ್ಚ್ 2018, 10:31 IST

ಅರಕಲಗೂಡು: ಪಟ್ಟಣದಲ್ಲಿ ಸೂಕ್ತ ಯೋಜನೆ ರೂಪಿಸದೆ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಅನುಷ್ಠಾನ ಮಾಡಲು ಮುಂದಾಗಿರುವ ಕಾರಣ ಯೋಜನೆ ಫಲಪ್ರದವಾಗದೆ ಸಾರ್ವಜನಿಕರ ಹಣ ದುರುಪಯೋಗವಾಗಿದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆರೋಪಿಸಿದರು.

ಒಳಚರಂಡಿ ಯೋಜನೆಗೆ ಬಹು ಮುಖ್ಯವಾಗಿ ಬೇಕಾದ ಇಂಗುಗುಂಡಿ, ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಇದುವರೆಗೂ ಸ್ವಾಧೀನ ಪಡಿಸಿಕೊಂಡಿಲ್ಲ. ₹ 9.78 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಕೆ ಕಾರ್ಯ ಮಾತ್ರ ನಡೆಸಲಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ₹ 2.42 ಕೋಟಿ ವೆಚ್ಚದಲ್ಲಿ ಭೂ ಸ್ವಾಧೀನಕ್ಕಾಗಿ ಹಣ ಕಟ್ಟಿ ಪ್ರಕ್ರಿಯೆ ನಡೆಸಿರುವುದಾಗಿ ಹೇಳುತ್ತಾರೆ. ಸೂಕ್ತ ಯೋಜನೆ ರೂಪಿಸದೆ ತರಾತುರಿಯಲ್ಲಿ ಕಾಮಗಾರಿ ನಡೆಸಲು ಮುಂದಾಗಿರುವುದರ ಹಿಂದೆ ಬೇರೆ ಉದ್ದೇಶ ಇರುವಂತೆ ಕಾಣುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ‌

ನಾಲ್ಕು ಹಂತಗಳ ಈ ಯೋಜನೆಗೆ ₹ 41 ಕೋಟಿ ವೆಚ್ಚದ ಪುನರ್‌ ವಿಮರ್ಷಿತ ಅಂದಾಜು ಪಟ್ಟಿಯನ್ನು ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಕಳಿಸಿದ್ದು ಇನ್ನೂ ಮಂಜೂರಾತಿ ದೊರೆತಿಲ್ಲ. ವ್ಯವಸ್ಥಿತವಾದ ಸಿದ್ಧತೆ ಇಲ್ಲದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದರಿಂದ ಯೋಜನೆ ವಿಫಲವಾಗುತ್ತದೆ. ಸಾರ್ವಜನಿಕರ ಹಣದ ಅಪವ್ಯಯಕ್ಕೆ ಕಾರಣರಾದವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ತಾಲ್ಲೂಕಿನ ಕಟ್ಟೇಪುರ ಅಣೆಕಟ್ಟೆ ನಾಲೆಯಲ್ಲಿ ಪ್ರಾರಂಭಿಸಿರುವ ಕಿರು ಜಲವಿದ್ಯುತ್ ಯೋಜನೆ ಕಾಲುವೆಯ ಬೆಡ್ ಲೆವೆಲ್‌ಗಿಂತ 1.8 ಮೀಟರ್ (ಸುಮಾರು 6ಅಡಿ) ತಳದಲ್ಲಿ ಇರುವ ಕಾರಣ ನಾಲೆಗಳಿಗೆ ನೀರು ಹತ್ತುತ್ತಿಲ್ಲ. ಇದರಿಂದ ರೈತರು ಕೋಟ್ಯಾಂತರ ರೂಪಾಯಿ ನಷ್ಟಕ್ಕೆ ಒಳಗಾಗಿದ್ದಾರೆ. ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳು ನೀಡಿರುವ ಭರವಸೆ ಇನ್ನೂ ಈಡೇರಿಲ್ಲ ಎಂದರು.

ತಾಲ್ಲೂಕಿನ ಅಜ್ಜೂರು ಗ್ರಾಮದ 6 ಸರ್ವೆ ನಂಬರ್‌ಗಳಲ್ಲಿ 47.9 ಎಕರೆ ಸರ್ಕಾರಿ ಜಮೀನನ್ನು ಬಹಳ ದಿನಗಳಿಂದಲೂ ಹರಿಜನ, ಗಿರಿಜನ ಕುಟುಂಬಗಳು ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ. ಭೂಮಿ ಹಿಡುವಳಿ ಹೊಂದಿದ ಅವರಿಗೆ ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ನೀಡದೆ ಹಿಡುವಳಿದಾರರೇ ಅಲ್ಲದ 19 ಮಂದಿ ಪ್ರಭಾವಶಾಲಿಗಳು, ಗುತ್ತಿಗೆದಾರರು, ಸರ್ಕಾರಿ ನೌಕರರಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.

ಕಟ್ಟೇಪುರ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಎಂದು ಗುರುತಿಸಿರುವ ಕುರಿತು ಟೀಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅನುದಾನ ನೀಡುತ್ತದೆಯೇ ಹೊರತು ಕಾರ್ಯ ಯೋಜನೆ ರೂಪಿಸುವ ಹೊಣೆ ರಾಜ್ಯ ಸರ್ಕಾರದ್ದೇ ಅಗಿದೆ. ಸಚಿವರು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡದೆ ಸಂಸದರ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಸಂಯೋಜಕ ಅತ್ನಿ ಹರೀಶ್ ಮಾತನಾಡಿ, ಜೆಡಿಎಸ್ ಮತ್ತು ಬಿಎಸ್‌ಪಿ ನಡುವೆ ನಡೆದಿರುವ ಹೊಂದಾಣಿಕೆಯಂತೆ ಈ ವಿಧಾನ ಸಭಾ ಕ್ಷೇತ್ರದಲ್ಲಿ ಎ.ಟಿ.ರಾಮಸ್ವಾಮಿ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಾರೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎ.ಆರ್‌.ಜನಾರ್ದನ ಗುಪ್ತ, ತಾಲ್ಲೂಕು ಬಿಎಸ್‌ಪಿ ಅಧ್ಯಕ್ಷ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.