ADVERTISEMENT

ರೈತರಿಗೆ ಮೇವಿನ ಮಿನಿ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:11 IST
Last Updated 14 ಮಾರ್ಚ್ 2017, 6:11 IST

ಹಾಸನ: ಜಿಲ್ಲೆಯ ಹೈನುರಾಸುಗಳಿಗೆ ಹಸಿರು ಮೇವಿನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ (ಹಾಮೂಲ್‌) ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಮೇವಿನ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ನಗರದ ಹಾಮೂಲ್‌ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ  ಜಾನುವಾರುಗಳ ನಿರ್ವಹಣೆ, ಗುಣಮಟ್ಟದ ಹಾಲು ಉತ್ಪಾದನೆ ಕುರಿತು ಉತ್ಪಾದಕರೊಂದಿಗೆ ಸಮಾಲೋಚನೆ ಕಾರ್ಯಕ್ರಮದಲ್ಲಿ  ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಅವರು ಉಚಿತವಾಗಿ ರೈತರಿಗೆ ಹಸಿರು ಮೇವಿನ ಬಿತ್ತನೆ ಬೀಜ ವಿತರಿಸಿದರು.
₹ 1.25 ಕೋಟಿ ವೆಚ್ಚದ 2 ಸಾವಿರ ಕ್ವಿಂಟಲ್‌ ಮೇವಿನ ಕಿಟ್‌ ಅನ್ನು 40 ಸಾವಿರ ರೈತರಿಗೆ ನೀಡಲಾಗುತ್ತಿದ್ದು, ಸಾಂಕೇತಿಕವಾಗಿ ಒಂದು ಸಾವಿರ ಮಂದಿಗೆ ಕಿಟ್‌ ವಿತರಿಸಲಾಯಿತು. ಉಳಿದವರು ಸೊಸೈಟಿ ಮೂಲಕ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಬಳಿಕ ಮಾತನಾಡಿದ ರೇವಣ್ಣ, ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.

ADVERTISEMENT

ಜಿಲ್ಲಾಡಳಿತವೂ ಮೇವು ಬೆಳೆಸಲು ಕ್ರಮ ಕೈಗೊಳಲಿಲ್ಲ. ಕಾರಣ ಏನು ಎಂಬುದು ಗೊತ್ತಿಲ್ಲ. ಬರದಿಂದಾಗಿಯೇ ರಾಜ್ಯದಲ್ಲಿ 10 ಲಕ್ಷ ಲೀಟರ್‌ ಹಾಲು ಕಡಿಮೆ ಆಗಿದೆ. ₹ 20, ₹ 40 ಸಾವಿರ ಮೌಲ್ಯದ ಜಾನುವಾರುಗಳನ್ನು ರೈತರು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀರಾವರಿ ಪ್ರದೇಶದಲ್ಲಿ ಮೇವು ಬೆಳೆಸುವಂತೆ ರೈತರಿಗೆ ಮೇವಿನ ಕಿಟ್‌ ವಿತರಿಸಲಾಗಿದೆ. ಎರಡು ತಿಂಗಳಲ್ಲಿ ಬೆಳೆ ಬೆಳೆಯಬಹುದು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಯುಗಾದಿ ಬಳಿಕ ಮಳೆ ಬಂದರೆ ಮತ್ತೆ ಬಿತ್ತನೆ ಬೀಜ ವಿತರಿಸಲಾಗುವುದು. ಕೃಷಿ ಸಾಲ ಮನ್ನಾ ಮಾಡುವಂತೆ ಸಂಸದ ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅರುಣ ಜೇಟ್ಲಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದ್ದು, ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪಿಸಲಾಗುವುದು. ₹ 320 ಕೋಟಿ ವೆಚ್ಚ ಮೆಗಾ ಡೇರಿ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಮೇ ತಿಂಗಳಲ್ಲಿ ₹ 50 ಕೋಟಿ ವೆಚ್ಚ ಐಸ್‌ಕ್ರೀಂ ಘಟಕ ಉದ್ಘಾಟನೆ ಯಾಗಲಿದ್ದು, ಹೊರ ರಾಜ್ಯಗಳಿಗೆ ಕಳುಹಿಸುವ ಯುಎಚ್‌ಟಿ ಹಾಲಿನ ಘಟಕವನ್ನು ₹ 55 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಸದ್ಯ ಲೀಟರ್‌ ಹಾಲಿಗೆ ₹ 27 ನೀಡುತ್ತಿದ್ದು, ದರ ಏರಿಕೆ ಮಾಡುವುದಿಲ್ಲ. ಆದರೆ ರೈತರು ಸಂಕಷ್ಟದಲ್ಲಿರುವುದರಿಂದ ಲೀಟರ್‌ ಹಾಲಿಗೆ ₹ 5 ಸಬ್ಸಿಡಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.

**

ರಿಯಾಯಿತಿ ದರದಲ್ಲಿ ಸಸಿ
ಬೀಜೋತ್ಪಾದನೆ ಕಾರ್ಯಕ್ರಮದಡಿ ಒಕ್ಕೂಟದ ವ್ಯಾಪ್ತಿಯ ಉತ್ಪಾದಕರಿಗೆ ಜೋಳದ ಬೀಜ ವಿತರಿಸಿ    ಪ್ರತಿ ವರ್ಷ ಸುಮಾರು 700 ರಿಂದ 800 ಕ್ವಿಂಟಲ್‌ ಮುಸುಕಿನ ಜೋಳವನ್ನು ರೈತರಿಂದ ಒಪ್ಪಂದ ಮೇರೆಗೆ ಖರೀದಿಸಲಾಗುತ್ತಿದೆ. ಬೇಸಿಗೆ ಹಾಗೂ ಇತರೆ ಸಂಕಷ್ಟದ ಸಮಯದಲ್ಲಿ ರಾಸುಗಳಿಗೆ ಹಸಿರು ಮೇವಿನ ಕೊರತೆಯಾಗದಂತೆ ಅಸಂಪ್ರದಾಯಿಕ ಅಗಸೆ, ನುಗ್ಗೆ ಹಾಗೂ ಇತರೆ ಮೇವಿನ ಸಸಿಗಳನ್ನು ಶೇ 60 ರಷ್ಟು ರಿಯಾಯಿತಿಯಲ್ಲಿ ಉತ್ಪಾದಕರಿಗೆ ವಿತರಿಸಲಾ ಗುವುದು ಎಂದು ರೇವಣ್ಣ ತಿಳಿಸಿದರು.

**

ತಲಾ ₹15 ಕೋಟಿ ವೆಚ್ಚದಲ್ಲಿ ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರದಲ್ಲಿ ಡೈರಿ ಆರಂಭಿಸಲಾಗಿದ್ದು, ಹಾಮೂಲ್‌ಗೆ  ಬಂದ  ₹ 22 ಕೋಟಿ ಲಾಭವನ್ನು ರೈತರಿಗೆ ನೀಡಲಾಗಿದೆ
-ಎಚ್‌.ಡಿ.ರೇವಣ್ಣ, ಹಾಮೂಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.