ADVERTISEMENT

ವಿಮಾನ ನಿಲ್ದಾಣ ಯೋಜನೆ ಸಾಕಾರಗೊಳಿಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:53 IST
Last Updated 25 ಏಪ್ರಿಲ್ 2017, 5:53 IST

ಶ್ರವಣಬೆಳಗೊಳ: ಮುಂಬೈ, ರಾಜಸ್ಥಾನ, ಗುಜರಾತ್ ಭಾಗದಿಂದ ಶ್ರೀ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಬರುವುದರಿಂದ ಹೊರ ರಾಜ್ಯದ ರೈಲುಗಳ ಸಂಪರ್ಕ ಕಲ್ಪಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಂಸದ ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಮೂಲ ಸೌಕರ್ಯ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ  ಮಾತನಾಡಿದರು.

ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಅನುದಾನ ಬಿಡುಗಡೆ ಕೋರಿ ಮತ್ತೆ ಪ್ರಧಾನಿ ಭೇಟಿಯಾಗಿ ಮನವಿ ಮಾಡಲಾಗುವುದು. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಯೋಜನೆ ಸಾಕಾರಗೊಳಿಸಬೇಕು. ಇದಕ್ಕಾಗಿ 580 ಎಕರೆ ಭೂಮಿ ಸ್ವಾದೀನ ಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಹಾಸನ ನಡುವೆ ಸಂಚರಿಸಲು ವಿಮಾನ ಬೇಕಿಲ್ಲ. ಈ ಭಾಗದ ರೈತರು ಬೆಳೆದ ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡಬೇಕು. ಇದರಲ್ಲಿ ಆದಾಯ ಲೆಕ್ಕ ಹಾಕಬೇಡಿ. ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.

ADVERTISEMENT

ರೈಲಿಗೆ ಹೆಸರಿಡಲು ಸಮ್ಮತಿ: ಹಾಸನ–ಬೆಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌, ಹಾಸನಾಂಬ ಹಾಗೂ ಕಾಲಭೈರವೇಶ್ವರ ಎಕ್ಸ್‌ಪ್ರೆಸ್‌ ಹೆಸರು ಇಡಲು ಕೇಂದ್ರ ರೈಲ್ವೆ ಸಚಿವರು ಒಪ್ಪಿದ್ದಾರೆ.

ಹಿರೀಸಾವೆಯಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದರೆ ಸಾಕು ಎಂದು ಗೌಡರು ತಿಳಿಸಿದರು.

ಜಿಲ್ಲೆಯ 7 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಾದ ಎಚ್‌.ಡಿ. ರೇವಣ್ಣ, ಎಚ್‌.ಎಸ್‌.ಪ್ರಕಾಶ್‌, ಸಿ.ಎನ್‌. ಬಾಲಕೃಷ್ಣ, ಎಚ್‌.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇ ಗೌಡ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಚಂದ್ರಪ್ರಭಸಾಗರ ಮಹಾರಾಜರು, ಪಾವನಕೀರ್ತಿ ಮಹಾರಾಜರು, ಗಿರಿನಾರಸಾಗರ ಮಹಾರಾಜರು, ಜ್ಞಾನಭೂಷಣಸಾಗರ ಮಹಾರಾಜರು, ಕುಂದಶ್ರೀ ಮಾತಾಜಿ, ಸುಪ್ರಭಾಮತಿ ಮಾತಾಜಿ, ಜಿನಕೀರ್ತಿ ಮಹಾರಾಜರು, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕಸ್ವಾಮೀಜಿ, ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ವೃಷಭಸೇನ ಸ್ವಾಮೀಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.