ADVERTISEMENT

ವಿಮಾನ ಸೇವೆಗಾಗಿ ಇ–ಅರ್ಜಿ ಅಭಿಯಾನ

ಮೈಸೂರಿನಲ್ಲಿ ವಿಮಾನಯಾನ ಸೇವೆ ಪುನರಾರಂಭಿಸಲು ಒತ್ತಾಯ; ಶೀಘ್ರ ಸಹಿ ಸಂಗ್ರಹ ಆರಂಭ

ಕೆ.ಓಂಕಾರ ಮೂರ್ತಿ
Published 27 ಮಾರ್ಚ್ 2017, 6:42 IST
Last Updated 27 ಮಾರ್ಚ್ 2017, 6:42 IST
ಮೈಸೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನಿಟ್ಟಿನಲ್ಲಿ ಮೈಸೂರಿನಲ್ಲಿ ವಿಮಾನಯಾನ ಸೇವೆ ಪುನರಾರಂಭಿಸುವಂತೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳು ಇ–ಅರ್ಜಿ ಅಭಿಯಾನ ಆರಂಭಿಸಿವೆ.
 
ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ನೇತೃತ್ವದಲ್ಲಿ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಶುರುವಾಗಿದ್ದು, 500ಕ್ಕೂ ಅಧಿಕ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ www.change.org ವೆಬ್‌ಸೈಟ್‌ ಮೂಲಕ ಇ–ಅರ್ಜಿ ಮನವಿ ಸಲ್ಲಿಸುತ್ತಿದ್ದಾರೆ. 
 
ಸೇವೆಯನ್ನು ಪುನರಾರಂಭಿಸುವಂತೆ ಇ–ಅರ್ಜಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಿಮಾನಯಾನ ಸಚಿವ ಅಶೋಕ್‌ ಗಣಪತಿರಾಜು ಅವರಿಗೆ ಮನವಿ ಮಾಡಲಾಗುತ್ತಿದೆ. 
 
‘ಅಭಿಯಾನಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ಆರಂಭಿಸುವ ಉದ್ದೇಶ ಹೊಂದಿದ್ದೇವೆ. ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿ ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ಟ್ರಾವೆಲ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 
ಅಲ್ಲದೆ, ವಿಮಾನ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 500 ಕಾರುಗಳನ್ನು ಒಳಗೊಂಡ ರ್‌್ಯಾಲಿ ಆಯೋಜಿಸಲು ನಿರ್ಧರಿಸಲಾಗಿದೆ. ಜೊತೆಗೆ, ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಉದ್ದೇಶಿಸಲಾಗಿದೆ.
 
‘ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ಕಾರ್ಯಗತವಾದರೆ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲಿದೆ. ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದೆ. ಕಣ್ಣೂರು ಮಾರ್ಗವಾಗಿ ಬೇರೆ ಪ್ರವಾಸಿ ಸ್ಥಳಗಳಿಗೆ ಹೋಗುತ್ತಾರೆ. ಈಗ ಮೈಸೂರು ಮೂಲಕ ಕೊಡಗು, ವಯನಾಡಿಗೆ ಹೋಗುತ್ತಿದ್ದಾರೆ. ಹೀಗಾಗಿ, ಇಲ್ಲಿ ವಿಮಾನಯಾನ ಸೇವೆ ಅಗತ್ಯವಿದೆ’ ಎಂದು ಸೇಫ್‌ ವೀಲ್ಸ್‌ ಸಂಸ್ಥೆಯ ಪ್ರಶಾಂತ್‌ ಹೇಳಿದರು.
 
‘ಬೆಂಗಳೂರು–ಮೈಸೂರು ನಡುವೆ ವಿಮಾನಯಾನ ಬೇಕು ಎಂದು ನಾವು ಕೇಳುತ್ತಿಲ್ಲ. ಬದಲಾಗಿ ಜೈಪುರ, ಹೈದರಾಬಾದ್‌, ಗೋವಾಕ್ಕೆ ಸಂಪರ್ಕ ಕಲ್ಪಿಸಬೇಕು’ ಎಂದರು. 
ವಿಮಾನಯಾನ ಸೇವೆ ಇಲ್ಲದಿದ್ದರೂ ಚಾರ್ಟರ್ಡ್‌ ವಿಮಾನದ ಮೂಲಕ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಬೌದ್ಧ ಧರ್ಮಗುರು ದಲೈ ಲಾಮಾ ಇಲ್ಲಿಗೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದಲ್ಲಿ ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ.
 
ಅಮಾನ್ಯೀಕರಣದ ಬಳಿಕ ಭಾರತೀಯ ನೋಟು ಮುದ್ರಣ ಘಟಕದಿಂದ ನೋಟು ಸಾಗಿಸಲು ವಿಮಾನಗಳು ಹಲವು ಬಾರಿ ಇಲ್ಲಿನ ನಿಲ್ದಾಣಕ್ಕೆ ಬಂದು ಹೋಗಿವೆ. 
ಮೈಸೂರಿನಲ್ಲಿ ಸುಮಾರು 15 ಲಕ್ಷ ಜನರು ವಾಸಿಸುತ್ತಿದ್ದಾರೆ.

ಅಲ್ಲದೆ, ಪ್ರತಿ ವರ್ಷ 30 ಲಕ್ಷಕ್ಕೂ ಅಧಿಕ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಯೋಗ, ಶಿಕ್ಷಣ, ಹೋಟೆಲ್‌ ಉದ್ಯಮ, ಆರೋಗ್ಯ, ಸಂಸ್ಕೃತಿಗೆ ಪ್ರಮುಖ ಕೇಂದ್ರವಾಗಿರುವ ನಗರವನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸಲು ಸಮರ್ಪಕ ಸಂಪರ್ಕ ಅಗತ್ಯವಿದೆ ಎಂಬುದು ವಿವಿಧ ಸಂಘಟನೆಗಳ ಸದಸ್ಯರ ಆಗ್ರಹ.
 
ಒಂದೂವರೆ ವರ್ಷದಿಂದ ಸ್ಥಗಿತ
ಮೈಸೂರು ನಗರದಿಂದ 10 ಕಿ.ಮೀ ದೂರವಿರುವ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹಲವು ವರ್ಷಗಳ ಇತಿಹಾಸವಿದ್ದರೂ ಸುಸಜ್ಜಿತ ಸೌಲಭ್ಯವಿರುವ ಟರ್ಮಿನಲ್‌, ಏರ್‌ ಟ್ರಾಫಿಕ್‌ ನಿಯಂತ್ರಣ ಗೋಪುರ ಹಾಗೂ ರನ್‌ವೇ ನಿರ್ಮಾಣವಾಗಿದ್ದು 2009ರಲ್ಲಿ. 2011ರಲ್ಲಿ ಮೊದಲ ಬಾರಿ ವಿಮಾನಯಾನ ಸೇವೆ ಆರಂಭವಾಯಿತು.

ಆದರೆ, ಹೆಚ್ಚು ದಿನ ಮುಂದುವರಿಯಲಿಲ್ಲ. ಹೀಗೆ, ನಾಲ್ಕು ಬಾರಿ ಆರಂಭವಾಗಿ ನಾಲ್ಕು ಬಾರಿ ಸ್ಥಗಿತಗೊಂಡಿದೆ. 2015ರ ನವೆಂಬರ್‌ ಬಳಿಕ ಮತ್ತೆ ಆರಂಭವಾಗಿಲ್ಲ. ಇದಕ್ಕೆ ಕಾರಣ  ಪ್ರಯಾಣಿಕರ ಕೊರತೆ.

9 ಮಂದಿ ಅಗ್ನಿಶಾಮಕ ಅಧಿಕಾರಿಗಳು ಸೇರಿದಂತೆ 26 ಸಿಬ್ಬಂದಿ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಲ್ಕು ಅಗ್ನಿಶಾಮಕ ವಾಹನಗಳಿವೆ. ರಾತ್ರಿ ವೇಳೆ ವಿಮಾನ ಇಳಿಯಲು ಇಲ್ಲಿ ಸೌಲಭ್ಯವಿದೆ.
 
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಮೈಸೂರಿನಲ್ಲಿ ವಿಮಾನಯಾನ ಸೇವೆ ಪುನರಾರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ನಾಲ್ಕು ತಿಂಗಳಲ್ಲಿ ಶುಭ ಸುದ್ದಿ ಬರಲಿದೆ
ಮನೋಜ್‌ಕುಮಾರ್‌ ಸಿಂಗ್‌, ನಿರ್ದೇಶಕ, ಮಂಡಕಳ್ಳಿ ವಿಮಾನ ನಿಲ್ದಾಣ
 
ಚುನಾವಣೆ ಪ್ರಚಾರಕ್ಕೆ ಬಂದಾಗ ನರೇಂದ್ರ ಮೋದಿ ಅವರು ಮೈಸೂರನ್ನು ಪ್ಯಾರಿಸ್‌ನಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಮೊದಲು ವಿಮಾನಯಾನ ಸೇವೆ ಕಲ್ಪಿಸಲಿ ಸಾಕು
ಪ್ರಶಾಂತ್‌, ಸೇಫ್‌ ವೀಲ್ಸ್‌ ಸಂಸ್ಥೆ, ಮೈಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.