ADVERTISEMENT

ವಿಶ್ವನಾಥ ದೇವಾಲಯಕ್ಕೆ ಮರುಜೀವ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 6:58 IST
Last Updated 3 ನವೆಂಬರ್ 2017, 6:58 IST
ಶ್ರಮದಾನದ ಬಳಿಕ ದೇವಾಲಯ ಕಂಡ ರೀತಿ
ಶ್ರಮದಾನದ ಬಳಿಕ ದೇವಾಲಯ ಕಂಡ ರೀತಿ   

ಹಾಸನ: ಸರ್ಕಾರ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದ ಕಾಶಿಪುರದ ವಿಶ್ವನಾಥ ದೇವಾಲಯ ಪಾಳು ಬಿದ್ದಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆ ಜಿಲ್ಲಾ ಸಂಘಟನಾ ಆಯುಕ್ತ ಕೊಟ್ರೇಶ್ ಎಸ್.ಉಪ್ಪಾರ್ ಹೇಳಿದರು.

ಹಳೇಬೀಡು ಹೋಬಳಿಯ ಅಡಗೂರು ಸಮೀಪವಿರುವ ಕಾಶಿಪುರದ ವಿಶ್ವನಾಥ ದೇವಾಲಯದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹಮ್ಮಿಕೊಂಡಿದ್ದ ಶ್ರಮದಾನದಲ್ಲಿ ಮಾತನಾಡಿದರು.

ಇಲ್ಲಿನ ಭವ್ಯ ಮಹಾದ್ವಾರ, ಗೋಪುರಗಳು, ಮಂಟಪಗಳು ಅನಾಥವಾಗಿವೆ. ಏಕಲವ್ಯ ಮುಕ್ತದಳದ ಆರ್.ಜಿ.ಗಿರೀಶ್, ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಮಾಲಾ ನೇತೃತ್ವದಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ದೇವಾಲಯ ಪ್ರವೇಶಿಸಲು ಆಗದಷ್ಟು ಗಿಡ, ಗಂಟಿಗಳು ಬೆಳೆದಿದ್ದವು. ಭಯದ ವಾತಾವರಣವಿತ್ತು. ಗಿಡ, ಗಂಟಿಗಳನ್ನು ತೆರವು ಮಾಡಲಾಗಿದ್ದು, ಈಗ ಮಹಾದ್ವಾರ ಅಂದವಾಗಿ ಕಾಣುತ್ತಿದೆ ಎಂದರು.

ADVERTISEMENT

ಹಾಸನದ ಎ.ವಿ.ಕೆ.ಕಾಲೇಜು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ (ಹೊಸ) ಕಾಲೇಜುಮ ಗಂಧದ ಕೋಟಿಯ ರೇಂಜರ್ಸ್, ಕಲಾ ಕಾಲೇಜು, ಎನ್.ಡಿ.ಆರ್.ಕೆ ಕಾಲೇಜು, ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಹೊಳೆನರಸೀಪುರದ ರೋವರ್ಸ್, ಏಕಲವ್ಯ ಮುಕ್ತದಳದ ರೋವರ್ಸ್ ಮಕ್ಕಳು ಶ್ರಮದಾನದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಏಕಲವ್ಯ ಮುಕ್ತದಳದ ಆರ್.ಜಿ.ಗಿರೀಶ್ ಮಾತನಾಡಿ, ‘ನಾಡು ನಮಗೇನು ನೀಡಿದೆ ಎನ್ನುವುದಕ್ಕಿಂತ ನಾಡಿಗಾಗಿ ನಾವೇನು ನೀಡಿದ್ದೇವೆ ಎಂದು ಮನಗಾಣಬೇಕು. ಸ್ವಾರ್ಥ ಭಾವನೆ ಇರಬಾರದು. ಆಗ ಮಾತ್ರ ಮಾಡುವ ಸೇವೆ ಸಾರ್ಥಕವಾಗುತ್ತದೆ’ ಎಂದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಮಾಲಾ ಮಾತನಾಡಿ, ಶಿಲಾಶಾಸನ ಮತ್ತು ದೇವಾಲಯಗಳು ಗತಕಾಲದ ಇತಿಹಾಸ ಹೇಳುತ್ತವೆ. ಸ್ಮಾರಕಗಳ ರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಕರೆ ನೀಡಿದರು. ಗೈಡರ್ ಸಿ.ರಾಣಿ, ಸ್ವಯಂ ಸೇವಕ ಸತ್ಯವತಿ ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.