ADVERTISEMENT

ವೈದ್ಯರು ಗೈರು: ರೋಗಿಗಳ ಪರದಾಟ

ಜಿಲ್ಲಾಸ್ಪತ್ರೆಯ ಕಿರಿಯ ವೈದ್ಯರ ಮೇಲೆ ಹಲ್ಲೆ; ಸೂಕ್ತ ರಕ್ಷಣೆ ಒದಗಿಸಲು ಪೋಷಕರ ಮನವಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 9:39 IST
Last Updated 3 ಜನವರಿ 2017, 9:39 IST

ಹಾಸನ: ಕರ್ತವ್ಯ ನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ  ಹಿರಿಯ ಮತ್ತು ಕಿರಿಯ ವೈದ್ಯರು ಕರ್ತವ್ಯಕ್ಕೆ ಗೈರು ಹಾಜರಾದ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದರು. ಕೆಲವೇ ಕಿರಿಯ ವೈದ್ಯರು ಮಾತ್ರ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿದ್ದರು. ಇತರೆ ವಿಭಾಗಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ತೊಂದರೆ ಅನುಭವಿಸಿದರು.

ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಮತ್ತು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ವೈದ್ಯರು ಮತ್ತು ವಿದ್ಯಾರ್ಥಿಗಳು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ನಿರ್ದೇಶಕರನ್ನು ಒತ್ತಾಯಿಸಿದರು.

ಈ ನಡುವೆ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪೋಷಕರು ಸಂಸ್ಥೆ ಆಡಳಿತಾಧಿಕಾರಿ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿದರು.

ಹಿಮ್ಸ್‌ ನಿರ್ದೇಶಕ ಡಾ.ರವಿಕುಮಾರ್‌ ಅವರು ವೈದ್ಯರ ಸಭೆ ನಡೆಸಿ  ಭದ್ರತೆ ಕಲ್ಪಿಸುವ ಭರವಸೆ ನೀಡಿದರು. ಜತೆಗೆ ವೈದ್ಯರು ರೋಗಿಗಳ ಸಂಬಂಧಿಕರ ಜತೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದರು. ಮಧ್ಯಾಹ್ನದ ಬಳಿಕ ವೈದ್ಯರು ಕರ್ತವ್ಯಕ್ಕೆ ಹಾಜರಾದರು.

ಹಳೇ ಕಟ್ಟಡದಲ್ಲಿದ್ದ ಪೊಲೀಸ್‌ ಚೌಕಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಒಳರೋಗಿಗಳ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಡ್ಡಇಟ್ಟು ಹೆಚ್ಚಿನ ಜನರು ಹೋಗುವುದನ್ನು ತಡೆಯಲಾಗಿದೆ. ಭದ್ರತಾ ಸಿಬ್ಬಂದಿ ಅನುಮತಿ ನೀಡಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

‘ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ   ದೂರು ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ. ಕಿಡಿಗೇಡಿಗಳ ಕೃತ್ಯದಿಂದಾಗಿ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ. ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರ ಕೆಲಸ ಮಾಡಲು ಬಿಡಬೇಕು.

ಅಸಭ್ಯವಾಗಿ ವರ್ತಿಸಿದರೆ ರೋಗಿಗಳು ಮತ್ತು ವೈದ್ಯರಿಗೂ ತೊಂದರೆ ಆಗುತ್ತದೆ. ವೈದ್ಯರ ಜತೆ ಸಮಾಲೋಚನೆ ನಡೆಸಲಾಗಿದ್ದು, ರಾತ್ರಿ ವೇಳೆ ಭದ್ರತೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿಮ್ಸ್‌ ನಿರ್ದೇಶಕ ಡಾ.ರವಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.