ADVERTISEMENT

ವೈದ್ಯರ ಮೇಲೆ ಹಲ್ಲೆ: ಆಸ್ಪತ್ರೆ ಕಿಟಕಿ ಗಾಜು ಪುಡಿ

ವ್ಯಕ್ತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ– ಆರೋಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 10:48 IST
Last Updated 2 ಜನವರಿ 2017, 10:48 IST

ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತನ ಸಂಬಂಧಿಕರು ರಾತ್ರಿ ಪಾಳಿ ವೈದ್ಯರ ಮೇಲೆ ಹಲ್ಲೆ ನಡೆಸಿ, ಕಿಟಕಿ ಗಾಜು, ಕುರ್ಚಿ ಮತ್ತಿತರ ವಸ್ತುಗಳನ್ನು ಜಖಂಗೊಳಿಸಿದ ಘಟನೆ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಈ ಘಟನೆಯನ್ನು ಖಂಡಿಸಿ ಭಾನು ವಾರ ಬೆಳಿಗ್ಗೆ ವೈದ್ಯರು ಮತ್ತು ನರ್ಸಿಂಗ್‌ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಆಲೂರು ಸಮೀಪ ಶನಿವಾರ ರಾತ್ರಿ 11ರ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ತೀವ್ರ ಗಾಯಗೊಂಡಿದ್ದ ವಿನೋದ್ (24) ಎಂಬಾತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.

ವಿನೋದ್‌ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿ ದ್ದಾರೆ ಎಂದು ಪ್ರಕಟಿಸಿದರು. ಈ ವಿಷಯ ಕೇಳಿದ ವಿನೋದ್‌ ಸಂಬಂಧಿಕರು ಗಲಾಟೆ ಪ್ರಾರಂಭಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯ ದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುರ್ಚಿ, ವ್ಹೀಲ್‌ ಚೇರ್‌ಗಳನ್ನು ಬಿಸಾಡಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಗಳ ಸಹಾಯದಿಂದ ವೈದ್ಯರ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ವಶಕ್ಕೆ ಪಡೆದರು.

ಸುದ್ದಿಗಾರರ ಜತೆ ಮಾತನಾಡಿದ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು, ‘ಶನಿವಾರ ರಾತ್ರಿ 12.15ಕ್ಕೆ ಅಪಘಾತ ದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಕರೆತರಲಾಯಿತು.  ಆರೋಗ್ಯ ತಪಾಸಣೆ ಮಾಡಿದಾಗ ಮೃತಪಟ್ಟಿದ್ದರು. ಈ ವಿಷಯ ಹೇಳುತ್ತಿದ್ದಂತೆ  ಮೃತನ ಸಂಬಂಧಿಕರು ನಮ್ಮ ಮೇಲೆ ಹಲ್ಲೆ ನಡೆಸಿದರು’ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆಸ್ಪತ್ರೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಿದ್ಯಾರ್ಥಿಗಳು ಭಾನುವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ. ಸಾರ್ವಜನಿಕ ಸೇವೆಯೇ ನಮ್ಮ ಧ್ಯೇಯವಾಗಿದೆ. ಆದರೆ, ಜನರು ಆಕ್ರೋಶದಿಂದ ಪರಿಸ್ಥಿತಿಯನ್ನು ಅರಿಯದೆ ಹಲ್ಲೆ ನಡೆಸುತ್ತಾರೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಆಸ್ಪತ್ರೆಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್‌ ಮಾತನಾಡಿ, ‘ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಗಲಾಟೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಪ್ಪಿತಸ್ಥ ರನ್ನು ಶೀಘ್ರದಲ್ಲಿಯೇ ಬಂಧಿಸಲಾಗು ವುದು ಎಂದು ಎಸ್‌ಪಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.