ADVERTISEMENT

ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 7:28 IST
Last Updated 22 ಆಗಸ್ಟ್ 2017, 7:28 IST
ಹಾಸನದಲ್ಲಿ ರೈತರು-ಕೃಷಿ ಕಾರ್ಮಿಕರು ಮತ್ತು ದಲಿತ ಸಂಘಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಹಾಸನದಲ್ಲಿ ರೈತರು-ಕೃಷಿ ಕಾರ್ಮಿಕರು ಮತ್ತು ದಲಿತ ಸಂಘಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.   

ಹಾಸನ: ‘ಡಾ.ಸ್ವಾಮಿನಾಥನ್ ಸಮಿತಿ ವರದಿ ಜಾರಿ, ಸಂಪೂರ್ಣ ಸಾಲ ಮನ್ನಾ ಮಾಡುವುದು ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುವಂತೆ ಆಗ್ರಹಿಸಿ ರೈತರು-ಕೃಷಿ ಕಾರ್ಮಿಕರು ಮತ್ತು ದಲಿತ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕೃಷಿ ಆಯೋಗದ ಸಲಹೆಯಂತೆ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಬೆಳೆಗೆ ಉತ್ಪಾದನಾ ವೆಚ್ಚದ ಶೇ 150 ಅನ್ನು ಬೆಂಬಲ ಬೆಲೆಯಾಗಿ ನಿಗದಿಪಡಿಸಬೇಕು. ದೇಸಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ತಡೆಯಲು ವಿದೇಶಿ ಕೃಷಿ-ಉತ್ಪನ್ನಗಳ ಮೇಲೆ ಗರಿಷ್ಟ ಸುಂಕವನ್ನು ಹೇರಬೇಕು.

ADVERTISEMENT

ರೈತರ, ಕೃಷಿ ಕಾರ್ಮಿಕರ ಹಾಗೂ ದಲಿತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ರಾಜ್ಯದಲ್ಲಿ ಆರು ವರ್ಷಗಳಿಂದ ಸತತವಾಗಿ ಕಾಡುತ್ತಿರುವ ಬರ ಮತ್ತು ಅತಿವೃಷ್ಟಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಲವತ್ತುಕೊಂಡರು.

ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ದೊಡ್ಡ ಕಂಪೆನಿಗಳ ಸುಮಾರು ₹ 25 ಲಕ್ಷ ಕೋಟಿಗೂ ಅಧಿಕ ಮೊತ್ತದ ತೆರಿಗೆ ವಿನಾಯಿತಿ ಮತ್ತು ಸಾಲ ಮನ್ನಾ ಮಾಡಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ 80 ರಷ್ಟಿರುವ ರೈತರ, ಕೃಷಿ ಕಾರ್ಮಿಕರ ಹಾಗೂ ದಲಿತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಮಾರ್ಗದರ್ಶಿ ಸೂತ್ರಗಳು ಬೆಳೆಗಾರರ ಬದಲು ಬಹುರಾಷ್ಟ್ರೀಯ ವಿಮಾ ಕಂಪೆನಿಗಳ ಪರವಾಗಿದೆ. ಬೆಳೆಗಾರರ ಪರವಾದ ಮಾರ್ಗದರ್ಶೀ ಸೂತ್ರಗಳನ್ನು ಅಳವಡಿಸಬೇಕು. ವಿಮಾ ಕಂಪೆನಿಗಳು ಎಸಗಿರುವ ಭ್ರಷ್ಟಾಚಾರದ ತನಿಖೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಸಂಯೋಜಕ ಎಂ.ಸಿ.ಡೋಂಗ್ರೆ, ರೈತ ಮುಖಂಡ ಕಣಗಾಲ್ ಮೂರ್ತಿ, ಕೆಪಿಆರ್‌ಎಸ್‌ನ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ ಕುಮಾರ್, ಕಾರ್ಯದರ್ಶಿ ವಸಂತ್‌ಕುಮಾರ್, ಎಂ.ಜಿ. ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.