ADVERTISEMENT

ಸಿ.ಎಂ ಕಾರಿಗೆ ಅಡ್ಡ ಬಂದ ಪಾನಮತ್ತ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:46 IST
Last Updated 23 ಜುಲೈ 2017, 9:46 IST

ಹಿರೀಸಾವೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಪಾನಮತ್ತ ವ್ಯಕ್ತಿಯೊಬ್ಬ ರಸ್ತೆಗೆ ಅಡ್ಡ ಬಂದಾಗ ಪೊಲೀಸರು ತಳ್ಳಿದಾಗ, ಆತ ಪಕ್ಕಕ್ಕೆ ಬಿದ್ದು ಗಾಯಗೊಂಡಿದ್ದು ಶನಿವಾರ ಇಲ್ಲಿ ನಡೆಯಿತು. ಇಲ್ಲಿನ ಶ್ರೀಕಂಠಯ್ಯ ವೃತ್ತದಲ್ಲಿ ಮುಖ್ಯಮಂತ್ರಿ ಕಾರು ಸೇರಿದಂತೆ ಹಲವು ವಾಹನಗಳು ಚನ್ನರಾಯಪಟ್ಟಣದ ಕಡೆಗೆ ಹೊರಟಿತ್ತಿದ್ದಾಗ, ಬೆಂಗಾವಲು ವಾಹನ ಬರುತ್ತಿದ್ದಂತೆ ವ್ಯಕ್ತಿ ಒಬ್ಬ ಅಚಾನಕ್ಕಾಗಿ ರಸ್ತೆಗೆ ಅಡ್ಡ ಬಂದಾಗ ಆ  ಸಮಯದಲ್ಲಿ ಸ್ಥಳದಲ್ಲಿದ್ದ ದುದ್ದ ಪಿಎಸ್‌ಐ ಸೋಮೇಗೌಡ, ಆತನನ್ನು ತಳ್ಳಿದರು. ರಸ್ತೆ ಪಕ್ಕಕ್ಕೆ ಬಿದ್ದ ವ್ಯಕ್ತಿ ಕೊತ್ತನಹಳ್ಳಿ ಗ್ರಾಮದ ತೋಪಯ್ಯ ಎಂದು ತಿಳಿದಿದ್ದು ಆತನ ತಲೆಗೆ ಪೆಟ್ಟಾಗಿದೆ.

ಇದರಿಂದ ಕೋಪಗೊಂಡ ಸಾರ್ವಜನಿಕರು ಪೊಲೀಸ್‌ ಅಧಿಕಾರಿಯ ವಿರುದ್ಧ ಹರಿಹಾಯ್ದರು. ನಂತರ ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ತೋಪಯ್ಯನಿಗೆ ಪೊಲೀಸರು ಚಿಕಿತ್ಸೆ ಕೊಡಿಸಿ, ಮನೆಗೆ ಬಿಟ್ಟರು. ಅದ್ಧೂರಿ ಸ್ವಾಗತ ಮುಖ್ಯಮಂತ್ರಿ ಚನ್ನರಾಯಪಟ್ಟಣಕ್ಕೆ ಹೊರಟಾಗ ಹೋಬಳಿಯ ಕಿರೀಸಾವೆ ಗಡಿಯಲ್ಲಿ ಜಿಲ್ಲಾ ಆಡಳಿತ ಮತ್ತು ಜನಪ್ರತಿನಿಧಿಗಳು ಅದ್ಧೂರಿ ಸ್ವಾಗತ ಕೋರಿದರು.

ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ತಾಲ್ಲೂಕಿನ ಜನತೆಯ ಪರವಾಗಿ ಸ್ವಾಗತಿಸಿದರು. ಸಚಿವ ಎ.ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್, ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ , ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಸೇರಿದಂತೆ ಹಲವು ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿದರು. ನೀರಾವರಿ ಯೋಜನೆಗಳು ಮತ್ತು ಹಿರೀಸಾವೆಯಲ್ಲಿ ಇಂಟರ್ ಸಿಟಿ ರೈಲು ನಿಲುಗಡೆ ಸಂಬಂಧಿಸಿದಂತೆ ಸಾರ್ವಜನಿಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.