ADVERTISEMENT

ಹಣದಿಂದ ಪ್ರತಿಭೆ ಮಾಪನ: ವಿಷಾದ

‘ನಾ ಕಂಡ ಸಿಎಸ್‌ಕೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿ.ಎಸ್.ಕೃಷ್ಣಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:15 IST
Last Updated 29 ಆಗಸ್ಟ್ 2016, 11:15 IST

ಹಾಸನ: ಹಿಂದಿನ ಕಾಲದ ಶಿಕ್ಷಣ ಪದ್ಧತಿಗೂ ಹಾಗೂ ಇಂದಿನ ಶೈಕ್ಷಣಿಕ ವ್ಯವಸ್ಥೆಗೂ ಸಾಕಷ್ಟು  ವ್ಯತ್ಯಾಸವಿದ್ದು, ಹಣದ ಆಧಾರದಲ್ಲಿ ವ್ಯಕ್ತಿಯ ಪ್ರತಿಭೆಯನ್ನು ಅಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಮಕೃಷ್ಣ ವಿದ್ಯಾಲಯ ಅಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ಸೀತಾರಾಮಾಂಜನೇಯ ದೇವಸ್ಥಾನದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ಇತ್ತೀಚೆಗೆ ಸಿ.ಎಸ್.ಕೆ. ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಅಭಿನಂದನೆ ಹಾಗೂ ‘ನಾ ಕಂಡ ಸಿ.ಎಸ್.ಕೆ.’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಅಧಿಕ ಹಣ ಪಡೆಯುವ ಶಿಕ್ಷಣ ಸಂಸ್ಥೆಗಳು ಉತ್ತಮ ಶಾಲೆ ಎಂಬ ಬಿರುದು ಪಡೆದಿವೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ದಿನಗಳು ಮಾರಕವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ಬಾಲ್ಯ ಜೀವನ ಸ್ಮರಿಸಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಎಸ್.ಪ್ರಕಾಶ್, ವೈಯಕ್ತಿಕ ಜೀವನದ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜ ಸೇವೆಯಲ್ಲಿ ತೊಡಗುವವರ ಸಂಖ್ಯೆ ತುಂಬಾ ವಿರಳ. ಅಂತಹ ಗಣ್ಯರ ಸಾಲಿಗೆ ಸಿ.ಎಸ್.ಕೃಷ್ಣಸ್ವಾಮಿ ಸೇರುತ್ತಾರೆ ಎಂದರು. ಹುಬ್ಬಳ್ಳಿ ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಕಾಡಿನಿಂದ ಹಿಡಿದು ನಾಡಿನವರೆಗೂ ಅಸಂಖ್ಯಾತ ಪುಷ್ಪಗಳು ಅರಳುತ್ತವೆ. ಆದರೆ, ಎಲ್ಲ ಪುಷ್ಪಗಳು ಭಗವಂತನ ಪಾದ ಸೇರುವುದಿಲ್ಲ ಎಂದರು.

ಸಿ.ಎಸ್.ಕೃಷ್ಣಸ್ವಾಮಿ ಕುರಿತ ‘ನಾ ಕಂಡ ಸಿ.ಎಸ್.ಕೆ’ ಪುಸ್ತಕ ಲೇಖಕ ಎಂ.ಜಿ.ಪಾಂಡುರಂಗ ಮಾತನಾಡಿದರು. ಮೂರ್ತಿ, ಶ್ರೀನಿವಾಸ್ ಮೂರ್ತಿ, ಟಿ.ಎಚ್.ಚಂದ್ರಶೇಖರ್, ಜಿ.ಎಸ್. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.