ADVERTISEMENT

ಹರಳಿನಂಥ ವಸ್ತು ಪತ್ತೆ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:37 IST
Last Updated 16 ಏಪ್ರಿಲ್ 2017, 6:37 IST

ಬೇಲೂರು: ತಾಲ್ಲೂಕಿನ ಇಬ್ಬೀಡು ಗ್ರಾಮದಲ್ಲಿ ರೈತರೊಬ್ಬರು ಶುಕ್ರವಾರ ರಾತ್ರಿ ಕೊಳವೆ ಬಾವಿ ಕೊರೆಸುವ ವೇಳೆ ಹರಳಿನಂಥ ವಸ್ತು ಪತ್ತೆಯಾಗಿದೆ. ಬೇಲೂರು– ಹಾಸನ ರಸ್ತೆಯ ಇಬ್ಬೀಡು ಗ್ರಾಮದ ರೈತ ಪ್ರಸನ್ನ ಅವರು ಶುಕ್ರವಾರ ರಾತ್ರಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುವ ವೇಳೆ ಹರಳಿನಂಥ ಕಲ್ಲು ಹೊರಗೆ ಬಂದಿದೆ.

ಸುಮಾರು 260 ಅಡಿ ಕೊರೆದಾಗ ಬಿಳಿ ಮಣ್ಣು ಬಂದಿದೆ. ಬಳಿಕ ಅರ್ಧ ಇಂಚು ನೀರು ಬಂದಿದೆ. 400 ಅಡಿ ಕೊರೆಯುವ ವೇಳೆ ನೀರು ಬರುವುದು ಸ್ಥಗಿತಗೊಂಡು ಹರಳಿನಂಥ ಕಲ್ಲು ಹೊರ ಬಂದಿದೆ. ಹರಳಿನ ಆಕಾರದಲ್ಲಿದ್ದ ಕಲ್ಲು ರಾತ್ರಿಯಲ್ಲೂ ಚಿನ್ನದ ಬಣ್ಣದಲ್ಲಿ ಹೊಳೆ ಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಹಶೀಲ್ದಾರ್‌ ಬಿ.ಎಸ್‌.ಪುಟ್ಟಶೆಟ್ಟಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಭೇಟಿ ನೀಡಿದಾಗ ಕೊರೆದಿದ್ದ ಕೊಳವೆ ಬಾವಿಯನ್ನು ಮುಚ್ಚಲಾಗಿತ್ತು. ಕೊಳವೆ ಬಾವಿ ಕೊರೆಸಿದ ರೈತ ಪ್ರಸನ್ನ ಅವರೂ ಮನೆಯಲ್ಲಿ ಇರಲಿಲ್ಲ. ಹರಳಿನಂಥ ಕಲ್ಲು ದೊರೆತ ಬಗ್ಗೆ ಅವರ ಮನೆಯವರನ್ನು ಪ್ರಶ್ನಿಸಿದಾಗ ‘ಆ ರೀತಿಯ ಯಾವ ಕಲ್ಲೂ ದೊರಕಿಲ್ಲ. ಸುಳ್ಳು ಹೇಳುತ್ತಿದ್ದಾರೆ. ಪ್ರಸನ್ನ ಅವರು ಕೇಸಿಂಗ್‌ ಪೈಪ್‌ ತರಲು ಹೋಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಕೊಳವೆ ಬಾವಿಯಲ್ಲಿ ದೊರೆತ ಮಣ್ಣನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗುವುದು. ಸೋಮವಾರ ಜಿಲ್ಲಾಧಿಕಾರಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.ಭೂ ವಿಜ್ಞಾನ ಇಲಾಖೆಯಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.