ADVERTISEMENT

ಹೆದ್ದಾರಿಯಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:19 IST
Last Updated 6 ಸೆಪ್ಟೆಂಬರ್ 2017, 6:19 IST

ಹಿರೀಸಾವೆ: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಬೈಕ್‌  ಯಾಲಿ ತಡೆಯಲು ಹಾಸನ ಜಿಲ್ಲಾ ಪೊಲೀಸರು ಹಿರೀಸಾವೆ ಹೋಬಳಿಯ ಹಾಸನ– ಮಂಡ್ಯ ಗಡಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಾತ್ಕಾಲಿಕ ಚೆಕ್‌ಪೋಸ್ಟ್‌ ನಿರ್ಮಿಸಿದ್ದಾರೆ.

ಹೊಳೆನರಸೀಪುರ ಎಎಸ್‌ಪಿ ಡಾ.ಜ್ಯೋತಿ ವೈದ್ಯನಾಥನ್‌ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ಮಧ್ಯಾಹ್ನ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬ್ಯಾರಿಕೇಡುಗಳನ್ನು ಹಾಕಿದರು. ಬೆಂಗಳೂರು ಕಡೆಯಿಂದ ಹಾಸನಕ್ಕೆ ಬರುವ (ಅನುಮಾನ ಬಂದ) ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ.

150 ಪೊಲೀಸರು ಹಾಗೂ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು; ಪ್ರತಿ ನಿತ್ಯ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಮೂರು ದಿನಗಳವರೆಗೆ ನಿಯೋಜನೆ ಮಾಡಲಾಗಿದೆ. ಚನ್ನರಾಯಪಟ್ಟಣ ಸಿಪಿಐ ಕೆ.ಎಂ.ವಸಂತಕುಮಾರ್, ಎಸ್‌ಐ ಬಿ.ಸಿ.ಜಗದೀಶ್‌ ಮತ್ತಿತರ ಅಧಿಕಾರಿಗಳು ತಾತ್ಕಾಲಿಕ ಚೆಕ್‌ಪೋಸ್ಟಿನ ಉಸ್ತುವಾರಿ ವಹಿಸಿದ್ದಾರೆ.

ADVERTISEMENT

ಬಸ್‌ ಮೂಲಕ ಮಂಗಳೂರಿಗೆ: ಬೆಂಗಳೂರಿನಲ್ಲಿ ಮಂಗಳವಾರ ಬೈಕ್‌ ರ್‍ಯಾಲಿ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಜಿಲ್ಲೆಗೆ ಆಗಮಿಸುತ್ತೆ ಎಂದು ಬಿಜೆಪಿ ಸ್ಥಳೀಯ ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದರು. ಬೆಂಗಳೂರಿನಲ್ಲಿ ಪೊಲೀಸರು ರ್‍ಯಾಲಿ ತಡೆದು ಬಿಜೆಪಿ ನಾಯಕರನ್ನು ಬಂಧಿಸಿದ ಸುದ್ದಿ ತಿಳಿದ ಕೆಲವು ಯುವ ಮೋರ್ಚಾ ಕಾರ್ಯಕರ್ತರು ಬೈಕುಗಳನ್ನು ಬಿಟ್ಟು ಬಸ್‌ ಮೂಲಕ ಮಂಗಳೂರಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.