ADVERTISEMENT

15ರಂದು ಜಾನಪದ ಕಲಾಮೇಳ

60 ತಂಡಗಳ 600 ಕಲಾವಿದರು, 400 ಶಾಲಾ ಮಕ್ಕಳಿಂದ ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 7:16 IST
Last Updated 12 ಫೆಬ್ರುವರಿ 2016, 7:16 IST

ಮೇಲುಕೋಟೆ: ಇಲ್ಲಿನ ಸ್ಥಾನೀಕಂ ಪ್ರಕಾಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಫೆ. 15ರಂದು ಬೆಳಿಗ್ಗೆ 6 ಗಂಟೆಗೆ 17ನೇ ರಾಜ್ಯಮಟ್ಟದ ಜಾನಪದ ಕಲಾಮೇಳ ಹಾಗೂ ರಥಸಪ್ತಮಿ ಉತ್ಸವ ಅಂಗವಾಗಿ ಸೂರ್ಯಮಂಡಲ ವಾಹನೋತ್ಸವ ಆಯೋಜಿಸಲಾಗಿದೆ.

ಬೆಳಿಗ್ಗೆ 6ಗಂಟೆಗೆ ಕಲಾಮೇಳದೊಂದಿಗೆ ಆರಂಭವಾಗುವ ಸೂರ್ಯಮಂಡಲ ವಾಹನೋತ್ಸವ ಬೆಳಿಗ್ಗೆ 9.30ರವರೆಗೆ ವೈಭವದಿಂದ ಚತುರ್ವೇದಿಗಳಲ್ಲಿ ನಡೆಯಲಿದೆ.

ಕಲಾತಂಡಗಳ ವಿವರ: ಆದಿಚುಂಚನಗಿರಿ ಮಠದ 75 ಮಂದಿ ವೀರಭದ್ರ ಕಲಾವಿದರ ತಂಡ, ಮೈಸೂರು ಪೊಲೀಸ್ ಬ್ಯಾಂಡ್, ಕೇರಳ ಯುವಕರ ಚಂಡೆ, ಪಂಚವಾದ್ಯ ಸೇರಿದಂತೆ 60ಕ್ಕೂ ಹೆಚ್ಚು ಜನಪದ ಕಲಾತಂಡಗಳ 600 ಕಲಾವಿದರು ಹಾಗೂ ಸುಮಾರು 400 ಶಾಲಾ ಮಕ್ಕಳು ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸಲಿದ್ದಾರೆ. 

ಬಂಟ್ವಾಳದ ಚಿಲಿಪಿಲಿ ಗೊಂಬೆ, ಶೃಂಗೇರಿಯ ಮರಗಾಲು ಕುಣಿತ, ಚಿಕ್ಕಮಗಳೂರಿನ ಪುಲಿಯಾಟ್ಟ, ಮೈಸೂರಿನ ಕೀಲುಕುದುರೆ, ಕರಗದ ನೃತ್ಯ, ಮೈಸೂರು ನಗಾರಿ, ಕೊರಟಗೆರೆಯ ಬ್ಯಾಂಡ್, ಯಕ್ಷಗಾನ ಗೊಂಬೆ ಬಳಗ, ತುಮಕೂರಿನ ಬಯಲಾಟದ ಪಾತ್ರಧಾರಿಗಳು, ಚಾಮರಾಜನಗರದ ಗೊರವರ ಕುಣಿತ, ಲಕ್ಷ್ಮೀಸಾಗರದ ನಾಸಿಕ್ ಡೋಲ್, ಕರಡಿಮಜಲು, ಮಂಡ್ಯ ಜಿಲ್ಲೆಯ ನಂದಿಕಂಬ, ಪಟಾಕುಣಿತ, ಪೂಜಾಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನಕುಣಿತ, ಚಕ್ರಾದಿಬಳೆ, ಖಡ್ಗಪವಾಡ, ವೀರಭದ್ರನಕುಣಿತ, ಶಾಲಾ ಮಕ್ಕಳ 101 ಕಳಶ, ವೀರಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಶಾಲಾಮಕ್ಕಳ ಬ್ಯಾಂಡ್...ಹೀಗೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ  ಜನಪದ ಕಲಾಪ್ರಕಾರಗಳ ಬಹುತೇಕ ತಂಡಗಳು ಭಾಗವಹಿಸಲಿವೆ.

ಶಾಲೆಗಳು: ಮೇಲುಕೋಟೆಯ ಗುರು ಶನೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಯದುಗಿರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಯದುಶೈಲಾ ಪ್ರೌಢಶಾಲೆ, ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಶಾಲೆ, ಉಳಿಗೆರೆಯ ಮೊರಾರ್ಜಿ ವಸತಿ ಶಾಲೆ, ತಿ. ನರಸೀಪುರದ ಶಾರದಾ ಸಾಂಸ್ಕೃತಿಕ ಕೇಂದ್ರ, ಪಾಂಡವಪುರದ ವಿಜಯ ಪ್ರೌಢಶಾಲೆ, ಜಯಂತಿನಗರದ ಶಂಭುಲಿಂಗೇಶ್ವರ ಶಾಲೆ, ಅರಳಕುಪ್ಪೆ ವಿವೇಕಾನಂದ ಪ್ರೌಢಶಾಲೆಗಳ ಮಕ್ಕಳು ಭಾಗವಹಿಸಿ 101 ಕಳಶ, ಬ್ಯಾಂಡ್, ಲಜೀಮ್, ಮಲ್ಲಕಂಬ, ಪಿರಮಿಡ್, ತಮಟೆ ಬ್ಯಾಂಡ್ ಪ್ರದರ್ಶನ ನೀಡಲಿದ್ದಾರೆ.

ಉದ್ಘಾಟನೆಗೆ ಗಣ್ಯರ ದಂಡು: ಫೆ. 15ರಂದು ಬೆಳಿಗ್ಗೆ 6 ಗಂಟೆಗೆ ಮೈಸೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ಎನ್. ಅಜಯ್ ನಾಗಭೂಷಣ್, ಉದ್ಯಮಿ ಸುಬ್ರಮಣ್ಯನಾಯ್ದು, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಇತರರು ಕಲಾಮೇಳ ಹಾಗೂ ರಥಸಪ್ತಮಿಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್, ಶ್ವಾಸಗುರು ವಚನಾನಂದ ಸ್ವಾಮೀಜಿ, ವಿದ್ವಾನ್ ಡಾ.ಕಮಲಾಕರ ಭಟ್, ಪರಮೇಶ್, ಲಯನ್ ವೆಂಕಟೇಶ್, ‘ಅಕ್ಷತಾ’ ಚಲನಚಿತ್ರದ ನಟ– ನಟಿ ಮತ್ತು ತಂತ್ರಜ್ಞರ ತಂಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿವಹಿಸಲಿದ್ದಾರೆ.

ಬಸ್ ವ್ಯವಸ್ಥೆ: ರಥಸಪ್ತಮಿಗೆ ಬರುವ ಭಕ್ತರಿಗೆ ಸಾರಿಗೆ ನಿಗಮವು ವಿವಿಧೆಡೆಯಿಂದ ಬಸ್   ಸೌಕರ್ಯ ಕಲ್ಪಿಸಿದೆ. ಮಂಡ್ಯ, ನಾಗಮಂಗಲ, ಕೆ.ಆರ್. ಪೇಟೆ ನಗರಗಳಿಂದ ಸೋಮವಾರ ಬೆಳಿಗ್ಗೆ 5.30ಕ್ಕೆ ಬಸ್ ವ್ಯವಸ್ಥೆ ಒದಗಿಸಲಾಗಿದೆ ಎಂದು ಮೇಲುಕೋಟೆ ಸಂಚಾರ ನಿಯಂತ್ರಕ ಸರ್ಪಶಯನ ಮಾಹಿತಿ ನೀಡಿದ್ದಾರೆ. ಅಲ್ಲದೆ, ಆಟೊ ಚಾಲಕರು ಮತ್ತು ಮಾಲೀಕರ ಸಂಘ ಕೂಡ ಜಕ್ಕನಹಳ್ಳಿ, ಬೆಳ್ಳಾಳೆ, ಮಾಣಿಕ್ಯನಹಳ್ಳಿ, ಚೀಣ್ಯ, ನಾರಾಯಣಪುರ ಇತರೆಡೆಗಳಿಂದ ಬೆಳಿಗ್ಗೆ 5.30ರಿಂದ ಆಟೊ ಸೌಕರ್ಯ ಕಲ್ಪಿಸಿದೆ.

ಬಿಗಿ ಭದ್ರತೆ: ಪ್ರವಾಸಿಗರ ಯಾವುದೇ ತೊಂದರೆ ಆಗದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು  ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.