ADVERTISEMENT

20ರಂದು ‘ಕೆರೆಗೆ ನೀರು ತುಂಬಿಸಿ’ ಆಂದೋಲನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:47 IST
Last Updated 28 ಫೆಬ್ರುವರಿ 2017, 9:47 IST

ಹಾಸನ: ‘ಬೋರ್‌ವೆಲ್‌ ಕೊರೆಯಿಸುವುದನ್ನು ನಿಲ್ಲಿಸಿ, ಕೆರೆಗಳಿಗೆ ನೀರು ತುಂಬಿಸಿ’ ಆಂದೋಲನವನ್ನು ಮಾ.20 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಸಿ.ಎಸ್.ಪುಟ್ಟೇಗೌಡ ಹೇಳಿದರು.

ಹೆಚ್ಚು  ಕೊಳವೆ ಬಾವಿ ಕೊರೆಯುತ್ತಿರುವುದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಮಾರ್ಚ್‌ 20ರಂದು ಆಂದೋಲನ ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಊಂಟಾಗಿದೆ. ಜಿಲ್ಲಾಡಳಿತ ಬೋರ್‌ವೆಲ್‌ ಕೊರೆಯುವುದನ್ನು ನಿಷೇಧಿಸಿದ್ದರೂ ಜನರು ಪೈಪೋಟಿ ಮೇಲೆ ಕೊರೆಯಿಸುತ್ತಿದ್ದಾರೆ. ಕೇವಲ 120 ಅಡಿಗೆ ಸಿಗುತ್ತಿದ್ದ ನೀರು ಇಂದು ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ ಎಂದರು.

ADVERTISEMENT

ಚನ್ನರಾಯಪಟ್ಟಣದಿಂದ ಬೆಳಿಗ್ಗೆ 6 ಗಂಟೆಗೆ ಸುಮಾರು 500 ರಿಂದ 1000 ಜನರು ಬೈಕ್‌ನಲ್ಲಿ ಹೊರಡಲಿದ್ದು, ಬಾಗೂರು, ನುಗ್ಗೆಹಳ್ಳಿ, ಶ್ರವಣಬೆಳಗೊಳ, ದಂಡಿಗನಹಳ್ಳಿ, ಉದಯಪುರ ಮೂಲಕ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಕಾರ್ಯಕ್ರಮಕ್ಕೆ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರನ್ನು ಆಹ್ವಾನಿಸಲಾಗುವುದು ಎಂದರು.

ಶ್ರೀನಿವಾಸಪುರದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯು ಕೆಲವರ ಹಿಡಿತದಲ್ಲಿದೆ. ನಿರ್ದೇಶಕರ ಗಮನಕ್ಕೂ ತರದೇ  5,700 ಷೇರುಗಳನ್ನು ಹೆಚ್ಚಿಸಲಾಗಿದೆ. ಆಡಳಿತ ಮಂಡಳಿಯ ಅವಧಿ ಮುಗಿದು  ವರ್ಷ ಕಳೆದಿದೆ.  ಕಾರ್ಖಾನೆಯಲ್ಲಿ ಅನೇಕ ಅಕ್ರಮಗಳು ನಡೆದಿದ್ದು , ಇದರ ಬಗ್ಗೆ ತನಿಖೆ ನಡೆಸಲು ಮುಂದಾದರೆ ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗುತ್ತಿದೆ.  ಅಕ್ರಮಗಳನ್ನು ಮುಚ್ಚಿಹಾಕಲು ಈ ಹಿಂದಿನ ಆಡಳಿತ ಮಂಡಳಿ ಸದಸ್ಯರು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕಾರ್ಖಾನೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು.  ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಹಾಸನ–ಬೆಂಗಳೂರು ನಡುವೆ ರೈಲು ಸಂಚಾರ ಆರಂಭವಾಗಲಿದ್ದು, ಚನ್ನರಾಯಪಟ್ಟಣ ರೈಲು ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.

ರೈತರು ಕೃಷಿಗೆ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೀಟರ್‌ ಬಡ್ಡಿಗೆ ಸಾಲ ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಮೀಟರ್‌ ಬಡ್ಡಿಗೆ ಕಡಿವಾಣ ಹಾಕಬೇಕು ಎಂದರು.

* ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಗುತ್ತಿಗೆದಾರರು, ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಆ ಹಣವನ್ನು ಕೆರೆಗೆ ನೀರು ತುಂಬಿಸಲು ಬಳಸಬೇಕು

-ಸಿ.ಎಸ್‌.ಪುಟ್ಟೇಗೌಡ
ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.