ADVERTISEMENT

24ರಂದು ಶ್ರವಣಬೆಳಗೊಳಕ್ಕೆ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 7:12 IST
Last Updated 20 ಏಪ್ರಿಲ್ 2017, 7:12 IST

ಶ್ರವಣಬೆಳಗೊಳ: ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಗೊಮ್ಮಟೇಶ್ವರ ಭಗವಾನ್  ಬಾಹುಬಲಿ ಮೂರ್ತಿ ಮಹಾಮಸ್ತಕಾಭಿಷೇಕದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ. 24 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು.ಪ್ರಾಕೃತ ವಿಶ್ವವಿದ್ಯಾಲಯ, ಅಂತರರಾಷ್ಟ್ರೀಯ ಪ್ರವಾಸಿ ಮಂದಿರ, 5 ಹೆಚ್ಚುವರಿ ಮತ್ತು 10 ಹೆಚ್ಚುವರಿ ಗಣ್ಯರ ಪ್ರವಾಸಿ ಮಂದಿರದ ವಿಸ್ತರಣಾ ಕಟ್ಟಡ, 66/1 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ, ವಿದ್ಯುತ್ ನಿರ್ವಹಣೆಗಾಗಿ ಅಗತ್ಯವಿರುವ ಕಾಮಗಾರಿಗಳು, ಹಾಲಿ ಬಸ್ ನಿಲ್ದಾಣದಲ್ಲಿ ಚಾಲಕ ಮತ್ತು ಸಿಬ್ಬಂದಿಗೆ ಡಾರ್ಮೆಟ್ರಿ ಕೊಠಡಿಗಳ ನಿರ್ಮಾಣ, 4 ತಾತ್ಕಾಲಿಕ ಬಸ್ ತಂಗುದಾಣಗಳ ನಿರ್ಮಾಣ, ಹಾಲಿ ಬಸ್ ನಿಲ್ದಾಣದ ಶಿಥಿಲ ಕಟ್ಟಡದ ಕಾಂಕ್ರೀಟೀಕರಣ ಮತ್ತು ಬಸ್ ನಿಲ್ದಾಣ ನವೀಕರಣ ಸೇರಿದಂತೆ ಒಟ್ಟು ₹ 91.65 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.

ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳ ಹೆಲಿಪ್ಯಾಡ್‌ಗೆ ಆಗಮಿಸುವರು. 11 ಗಂಟೆಗೆ ಕರ್ನಾಟಕ ಜೈನ್ ಅಸೋಷಿಯೇಷನ್ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 12 ಗಂಟೆಗೆ ಮಹಾಮಸ್ತಕಾಭಿಷೇಕ ಮೂಲ
ಸೌಕರ್ಯ ಕಾಮಗಾರಿಗೆ  ಚಾಲನೆ ನೀಡುವರು.

ಮಹಾವೀರ ಶಾಂತಿ ಪ್ರಶಸ್ತಿ ಸ್ಥಾಪಿಸಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಗೂ  ಶ್ರವಣಬೆಳಗೊಳದ ಮೂಲಕ ಹಾಸನ-–ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಸಂಸದ ಎಚ್.ಡಿ. ದೇವೇಗೌಡರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಕರ್ನಾಟಕ ಜೈನ್ ಅಸೋಸಿಯೇಷನ್, ದಕ್ಷಿಣ ಭಾರತ ಜೈನ ಸಭಾ ಮತ್ತು ಸಕಲ ಜೈನ ಸಮಾಜದ ಪರವಾಗಿ ಹಮ್ಮಿಕೊಳ್ಳಲಾಗಿದೆ.

ADVERTISEMENT

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ  ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು,  ಸಚಿವ ಎ.ಮಂಜು ಶುಭ ನುಡಿಗಳನ್ನಾಡುವರು, ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ನಾಡೋಜ ಹಂಪ ನಾಗರಾಜಯ್ಯನವರು ಅಭಿನಂದನಾ ನುಡಿಗಳನ್ನಾಡುವರು ಎಂದು ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ, ಸಚಿವರು ಹಾಗೂ ಸಂಸದ ಎಚ್.ಡಿ. ದೇವೇಗೌಡರನ್ನು ಸ್ವಾಗತಿಸಲು ಶ್ರವಣಬೆಳಗೊಳದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಹುಬಲಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಸುಮಾರು 10 ಸಾವಿರ ಮಂದಿ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.  ಸಾರ್ವಜನಿಕರಿಗೆ ಮಹಿಳಾ ಹಾಸ್ಟೆಲ್ ಬಳಿ ಎರಡು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ.

ಅತಿಗಣ್ಯರು, ಗಣ್ಯರು ಮತ್ತು ಅಧಿಕಾರಿಗಳ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅತಿಗಣ್ಯರಿಗೆ ವಿವಿಐಪಿ ಗೆಸ್ಟ್ ಹೌಸ್‌ ಮತ್ತು ಅಧಿಕಾರಿಗಳಿಗೆ ಗೆಸ್ಟ್ ಹೌಸ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಎಂದಿನಂತೆ ಶ್ರೀಮಠದ ಬಳಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.