ADVERTISEMENT

25ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:31 IST
Last Updated 23 ಮಾರ್ಚ್ 2017, 6:31 IST

ಹಾಸನ: ಸರ್ಕಾರಿ ವಿಜ್ಞಾನ ಕಾಲೇಜು ವತಿಯಿಂದ ಮಾರ್ಚ್‌ 25 ಮತ್ತು 28ರಂದು ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಎಸ್‌.ಎಚ್‌. ಗಂಗೇಗೌಡ ತಿಳಿಸಿದರು.

ಮಾರ್ಚ್‌ 25ರಂದು ವಿದ್ಯುನ್ಮಾನ, ಭೌತ ವಿಜ್ಞಾನ, ಗಣಿತ ವಿಜ್ಞಾನ, ಗಣಕ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಭಾಗದಿಂದ ಆರ್ಎಪಿಎಸ್‌ ವಿಷಯ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ವಿಚಾರ ಸಂಕಿರಣದಲ್ಲಿ ರಾಷ್ಟ್ರ ಮಟ್ಟದ ವಿಜ್ಞಾನಿಗಳು, ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಭೌತವಿಜ್ಞಾನ ವಿದ್ಯಾರ್ಥಿಗಳು 60 ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡುವರು. ಭೌತವಿಜ್ಞಾನದಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವರು. ಶಾಸಕ ಎಚ್.ಎಸ್.ಪ್ರಕಾಶ್ ವಿಚಾರ ಸಂಕಿರಣ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಎಸ್.ಎಚ್.ಗಂಗೇಗೌಡ ಅಧ್ಯಕ್ಷತೆ ವಹಿಸುವರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಪಾದ್, ಡಾ.ನವೀನ್ ಕುಮಾರ್, ಪ್ರೊ.ಅಣ್ಣಯ್ಯ ಹಾಗೂ ಮುಖ್ಯ ಅತಿಥಿಯಾಗಿ ಕಾಲೇಜಿನ ಡೀನ್ ಮಹೇಶಪ್ಪ ಭಾಗವಹಿಸಲಿದ್ದಾರೆ. ಮೊಸಳೆಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರೇಗೌಡ ಸಂಜೆ 4.30 ಕ್ಕೆ ಸಮಾರೋಪ ಭಾಷಣ ನಡೆಸಿಕೊಡುವರು ಎಂದು ಹೇಳಿದರು.

ಮಾರ್ಚ್‌ 28 ರಂದು ಕಾಲೇಜಿನ ಜೀವವಿಜ್ಞಾನ ವಿಭಾಗದಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಮೈಸೂರು ಮಾನಸ
ಗಂಗೋತ್ರಿಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಕೆ.ಎ.ರಮೇಶ್ ವಿಚಾರ ಸಂಕಿರಣ ಉದ್ಘಾಟಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಭಾರತಿ ಪಿ ಸಾಲಿಮಠ್, ಕ್ಲೆಟ್ಸ್ ಡಿಸೋಜ, ಸಿಎಫ್‌ಟಿರ್ಐ ವಿಜ್ಞಾನಿ ಪ್ರಫುಲ್ಲಾ, ಹಿರಿಯ ವಿಜ್ಞಾನಿ ಡಾ.ಕೇಶವನ್ ಶುಭಹರನ್  ಉಪನ್ಯಾಸ ನೀಡುವರು.

ಅದೇ ಸಂಜೆ ಪಶುವೈದ್ಯಕೀಯ ಕಾಲೇಜಿನ ಡೀನ್‌ ಡಾ.ವಸಂತ್‌ ಅವರು ಸಮಾರೋಪ ಭಾಷಣ ಮಾಡುವರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಟಿ.ಎಲ್‌.ಸುಧಾಖರ್‌ ಅಧ್ಯಕ್ಷತೆ ವಹಿಸುವರು ಎಂದರು. ಸರ್ಕಾರಿ ವಿಜ್ಞಾನ ಕಾಲೇಜಿನ ಡೀನ್ ಮಹೇಶಪ್ಪ, ಅಧ್ಯಾಪಕರಾದ ಕಿರಣ್, ತೋಯಜಾಕ್ಷ, ಸಿ.ಎಸ್. ಮೊಹನ್, ಬಾಬಿ ಮ್ಯಾಥ್ಯೂ, ಪಾರ್ಥಸಾರಥಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT