ADVERTISEMENT

42 ಕರುಗಳ ಅಕ್ರಮ ಸಾಗಣೆ ಪತ್ತೆ, 6 ಸಾವು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 7:41 IST
Last Updated 25 ನವೆಂಬರ್ 2017, 7:41 IST
ಹಿರೀಸಾವೆ ಸಮೀಪದ ಮಟ್ಟನವಿಲೆ ಬಳಿ ನಡೆದ ಅಪಘಾತದ ಸಂದರ್ಭದಲ್ಲಿ ಪತ್ತೆಯಾದ ಕರುಗಳನ್ನು ಪೊಲೀಸರು ಮತ್ತು ಗೃಹರಕ್ಷಕ ದಳದವರು ರಕ್ಷಿಸಿದರು
ಹಿರೀಸಾವೆ ಸಮೀಪದ ಮಟ್ಟನವಿಲೆ ಬಳಿ ನಡೆದ ಅಪಘಾತದ ಸಂದರ್ಭದಲ್ಲಿ ಪತ್ತೆಯಾದ ಕರುಗಳನ್ನು ಪೊಲೀಸರು ಮತ್ತು ಗೃಹರಕ್ಷಕ ದಳದವರು ರಕ್ಷಿಸಿದರು   

ಹಿರೀಸಾವೆ: ಎರಡು ಲಾರಿಗಳ ನಡುವೆ ಡಿಕ್ಕಿಯಾಗಿದ್ದರಿಂದ ಕಸಾಯಿಖಾನೆಗೆ ಅಕ್ರಮವಾಗಿ 42 ಎಳೆ ಕರುಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣ ಮಟ್ಟನವಿಲೆ ಬಿಳಿ ಶುಕ್ರವಾರ ಬೆಳಿಗ್ಗೆ ಬಯಲಾಗಿದೆ.

ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇರುವ ರಸ್ತೆ ಹಂಪ್ಸ್‌ ಬಳಿ ಹಾಸನ ಕಡೆಯಿಂದ ಬರುತ್ತಿದ್ದ ಮಿನಿ ಲಾರಿಯ ಚಾಲಕ ಬ್ರೇಕ್‌ ಹಾಕಿದ. ಆಗಲೇ ಮತ್ತೊಂದು ಲಾರಿ ಹಿಂದಿನಿಂದ ಬಂದು ಡಿಕ್ಕಿಯಾಯಿತು. ಈ ಅವಘಡದಿಂದ ಮಿನಿ ಲಾರಿಯ ಹಿಂದಿನ ಚಕ್ರ ಒಡೆದು, ಮುಂದಕ್ಕೆ ಚಲಿಸಲಾಗದೆ ಅಲ್ಲೇ ನಿಂತಿತು. ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು.

ಹಿರೀಸಾವೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನವನ್ನು ಪರಿಶೀಲಿಸಿದಾಗ, ಮಿನಿ ಲಾರಿಯಲ್ಲಿ ಒಂದು ವಾರ ವಯಸ್ಸಿನ ಮಿಶ್ರ ತಳಿಯ 42 ಗಂಡು ಕರುಗಳು ಪತ್ತೆಯಾದವು. ಅವುಗಳ ಕಾಲುಗಳನ್ನು ಕಟ್ಟಿ, ಒಂದರ ಮೇಲೆ ಒಂದನ್ನು ಸರಕು ತುಂಬುವ ರೀತಿಯಲ್ಲಿ ತುಂಬಲಾಗಿತ್ತು. 6 ಕರುಗಳು ಉಸಿರುಗಟ್ಟಿ ಮೃತಪಟ್ಟಿದ್ದವು. ಪೊಲೀಸರು ಬದುಕುಳಿದ ಕರುಗಳ ಕಾಲನ್ನು ಬಿಚ್ಚಿ, ಅಪಘಾತ ಮಾಡಿದ ಲಾರಿಗೆ ಹತ್ತಿಸಿದರು.

ADVERTISEMENT

ಎರಡು ಲಾರಿಗಳು ಮತ್ತು ಕರುಗಳನ್ನು ಪೊಲೀಸ್‌ ಠಾಣೆಗೆ ತರಲಾಯಿತು. ನಂತರ ಗೃಹರಕ್ಷಕರು ಮತ್ತು ಪೊಲೀಸರು 30 ಲೀಟರ್ ನಂದಿನಿ ಹಾಲನ್ನು ತರಿಸಿ, ಕರುಗಳಿಗೆ ಕುಡಿಸಿ ಆರೈಕೆ ಮಾಡಿದರು. ಹಿರೀಸಾವೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಮತ್ತು ಸಹಾಯಕ ಭರತ್ ಎಲ್ಲ ಕರುಗಳ ಆರೋಗ್ಯ ತಪಾಸಣೆ ನಡೆಸಿದರು. ಅಗತ್ಯ ಇರುವ ಕರುಗಳಿಗೆ ಸೂಕ್ತ ಚಿಕಿತ್ಸೆ ನೀಡಿದರು. ನಂತರ 36 ಗಂಡು ಕರುಗಳನ್ನು ಮೈಸೂರಿನ ಗೋ ಶಾಲೆಗೆ ಕಳುಹಿಸಿದರು.

ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಈ ಕರುಗಳನ್ನು ಕೊಂಡು, ಬೆಂಗಳೂರಿಗೆ ಸಾಗಣೆ ಮಾಡಲಾಗುತ್ತಿತ್ತು. ಅಪಘಾತ ನಡೆದ ನಂತರ ಮಿನಿ ಲಾರಿಯ ಚಾಲಕ ಹಾಗೂ ಸಿಬ್ಬಂದಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತ ಮತ್ತು ಕರುಗಳ ಅಕ್ರಮ ಸಾಗಣೆಯ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.