ADVERTISEMENT

50ಕ್ಕೂ ಹೆಚ್ಚು ಅಕ್ರಮ ಮಳಿಗೆ ತೆರವು

ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಗಿ ಪಡೆಯದೇ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳು

ಕೆ.ಎಸ್.ಸುನಿಲ್
Published 6 ಮಾರ್ಚ್ 2017, 10:44 IST
Last Updated 6 ಮಾರ್ಚ್ 2017, 10:44 IST
ಹಾಸನ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ನಿರ್ಮಿಸಿದ್ದ ಮಳಿಗೆಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.
 
ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು ನಡೆಸಲು ಅಡ್ಡಿಯಾಗಿದ್ದ 50ಕ್ಕೂ ಹೆಚ್ಚು ಅಂಗಡಿ ಮಳೆಗೆ ತೆರವುಗೊಳಿಸಲಾಯಿತು. ಪರವಾನಗಿ ಪಡೆಯದೆ ಕಳೆದ 9 ತಿಂಗಳಲ್ಲಿ 60ಕ್ಕೂ ಹೆಚ್ಚು ಮಳಿಗೆ ತಲೆ ಎತ್ತಿದ್ದವು. ಅಂಗಡಿ ಮಾಲೀಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಯಾವುದೇ ಶುಲ್ಕ ಪಾವತಿಸಿರುತ್ತಿರಲಿಲ್ಲ.

ಟೀ ಅಂಗಡಿ, ಹೋಟೆಲ್, ಚಿಲ್ಲರೆ ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಎಪಿಎಂಸಿಗೆ ಆದಾಯ ಸೋರಿಕೆ ಆಗುತ್ತಿತ್ತು.
 
ಎಪಿಎಂಸಿ ಆವರಣದಲ್ಲಿರುವ ಮಳಿಗೆಯಲ್ಲಿ ತರಕಾರಿ, ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದರು. ಮತ್ತೆ ಕೆಲವರು ಮೇಜು, ಕುರ್ಚಿ, ಅಗತ್ಯ ಸಾಮಗ್ರಿ ಇಟ್ಟುಕೊಂಡು ಶುಲ್ಕರಹಿತ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ತಳ್ಳುವಗಾಡಿಯಲ್ಲಿ ಜ್ಯೂಸ್, ಹಣ್ಣು, ತಿಂಡಿ, ತರಕಾರಿ ಮಾರಾಟ ಮಾಡಲು ಬಂದವರು ಅಲ್ಲೇ ಒಂದು ಜಾಗ ಹುಡುಕಿ ಮಳಿಗೆ ಹಾಕಿಕೊಂಡ ಶಾಶ್ವತವಾಗಿ ನೆಲೆಸಲು ಯತ್ನಿಸಿದ್ದರು.
 
ಈ ಎಲ್ಲಾ ಮಾಹಿತಿ ಕಲೆ ಹಾಕಿದ್ದ ನೂತನ ಅಧ್ಯಕ್ಷ ಲಕ್ಷ್ಮಣಗೌಡ ಆರಂಭದಲ್ಲಿ ಮಳಿಗೆ ತೆರವುಗೊಳಿಸು ವಂತೆ ನೋಟಿಸ್‌ ನೀಡಿದರೂ ಜಗ್ಗಲಿಲ್ಲ. ಹೀಗಾಗಿ, ಪೊಲೀಸ್‌ ಭದ್ರತೆಯಲ್ಲಿ ಜೆಸಿಬಿಯೊಂದಿಗೆ ಕಾರ್ಯಾಚರಣೆ ನಡೆಸಿದರು. ನೋಡು ನೋಡುತ್ತಿದ್ದಂತೆ ಮಳಿಗೆಗಳು ನೆಲಸಮವಾದವು. ಅಂಗಡಿ ಮಳಿಗೆ ತೆರವು ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದರು.
 
‘ಜೀವನ ನಡೆಸಲು ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡಿದ್ದೇವೆ. ನೀರು, ವಿದ್ಯುತ್‌ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲ. ಬಾಡಿಗೆ ನಿಗದಿಪಡಿಸಿದರೆ ಕಟ್ಟುತ್ತೇವೆ’ ಎಂದು ವಾದಿಸಿದರು. ಇದಕ್ಕೆ ಅಧ್ಯಕ್ಷರು ಸೊಪ್ಪು ಹಾಕಲಿಲ್ಲ. ಅನ್ಯ ಮಾರ್ಗ ಇಲ್ಲದೆ ಅಂಗಡಿಯಲ್ಲಿನ ಸಾಮಗ್ರಿ ಆಟೊ ಮತ್ತು ಇತರೆ ವಾಹನದಲ್ಲಿ ಸಾಗಿಸಿದರು.
 
‘ಅಕ್ರಮ ಮಳಿಗೆಗಳು ತಲೆಎತ್ತಿರುವುದರಿಂದ ಮಾರುಕಟ್ಟೆ ಸಂಕೀರ್ಣ ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ರೈತರು ಮತ್ತು ವರ್ತಕರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮಳಿಗೆ ತೆರವು ಗೊಳಿಸಲಾಯಿತು. ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಳದಿಂದ ಬರುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಪರವಾನಗಿ ಹೊಂದಿದವರಿಗೆ ಮಾತ್ರ ವ್ಯಾಪಾರ, ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮೆಗಾ ಮಾರುಕಟ್ಟೆ ಆಗಿ ಪರಿವರ್ತಿಸುವ ಉದ್ದೇಶ ಇದೆ’ ಎಂದು ಎಪಿಎಂಸಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.
 
* ಅಕ್ರಮ ಮಳಿಗೆ ತೆರವುಗೊಳಿ ಸುವಂತೆ ನೋಟಿಸ್ ನೀಡಿ ಎಚ್ಚರಿಸಲಾಗಿತ್ತು. ಇದ್ಯಾವುದಕ್ಕೂ ಬೆಲೆ ನೀಡದ ಕಾರಣ ತೆರವು ಕಾರ್ಯಾಚರಣೆ ನಡೆಸಲಾಯಿತು
ಲಕ್ಷ್ಮೇಗೌಡ, ಕಾರ್ಯದರ್ಶಿ, ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.