ADVERTISEMENT

9ರಿಂದ ಮಕ್ಕಳ ಸಾಹಿತ್ಯ ಸಮ್ಮೇಳನ

ಪ್ರಥಮ ಬಾರಿಗೆ ನಡೆಯುತ್ತಿರುವ ಸಮ್ಮೇಳನ; ವಿಚಾರ ಗೋಷ್ಠಿ, ಲೇಸರ್ ಶೋ, ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:06 IST
Last Updated 8 ಫೆಬ್ರುವರಿ 2017, 8:06 IST
ಹಾಸನದಲ್ಲಿ ಮಂಗಳವಾರ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಮಕ್ಕಳ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು
ಹಾಸನದಲ್ಲಿ ಮಂಗಳವಾರ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಮಕ್ಕಳ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು   

ಹಾಸನ: ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಫೆ.9 ಮತ್ತು 10ರಂದು ನಗರದಲ್ಲಿ ನಡೆಯಲಿದೆ  ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ  ಸಮ್ಮೇಳನಕ್ಕೆ 17 ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನ ಅಧ್ಯಕ್ಷರಾಗಿ ಉಜಿರೆಯ ಭಾರ್ಗವಿ, ಸಹ ಅಧ್ಯಕ್ಷರಾಗಿ ಹಾಸನದ ವಿವೇಕ್‌, ಬಾಗಲಕೋಟೆಯ ಗೌರಮ್ಮ, ಬೆಳ್ತಂಗಡಿಯ ಅನನ್ಯ ಮತ್ತು ತುಮಕೂರಿನ ಸುಬ್ರಹ್ಮಣ್ಯ ನಾವಡ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಮಕ್ಕಳು ಮತ್ತು ಪೋಷಕರಿಗೆ ತಿಂಡಿ, ಊಟದ ವ್ಯವಸ್ಥೆ ಆಗಿದೆ. ಮಠ, ಯೂಥ್‌ ಹಾಸ್ಟೆಲ್‌, ಕಲ್ಯಾಣಮಂಟಪದಲ್ಲಿ ಅವಕಾಶ ಇದೆ. 13 ಸಮಿತಿ ರಚಿಸಿದ್ದು, 200 ಸ್ವಯಂ ಸೇವಕರು ಕಾರ್ಯ ನಿರ್ವಹಿಸುವರು. ಮಕ್ಕಳನ್ನು ಕರೆತರಲು ಬಸ್‌ ಸೌಲಭ್ಯ, ಆಂಬುಲೆನ್ಸ್‌, ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಮ್ಮೇಳನಕ್ಕೆ ಅಂದಾಜು ₹ 25–30 ಲಕ್ಷ ವೆಚ್ಚ ಆಗಬಹುದು. ಸರ್ಕಾರ ಅನುದಾನ ನೀಡಿಲ್ಲ. ನಗರಸಭೆ ವೇದಿಕೆ ನಿರ್ಮಿಸಲು ₹ 4 ಲಕ್ಷ ನೀಡಿದೆ. ಮಠದ ವತಿಯಿಂದ ಊಟದ ವ್ಯವಸ್ಥೆ ಆಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

9ರಂದು ಬೆಳಿಗ್ಗೆ 8.30ಕ್ಕೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಲಿದೆ, ಸಮ್ಮೇಳನ ಅಧ್ಯಕ್ಷರನ್ನು ಎನ್‌.ಆರ್‌.ವೃತ್ತ, ಶಂಕರ ಮಠದ ರಸ್ತೆಯಿಂದ ಮೆರವಣಿಗೆಯಲ್ಲಿ ಕರೆತರಲಾಗುವುದು.

11ಗಂಟೆಗೆ ಸಂಸದ ಎಚ್‌.ಡಿ.ದೇವೇಗೌಡ ಸಮ್ಮೇಳನಕ್ಕ ಚಾಲನೆ ನೀಡುವರು, ಸಚಿವ ಎ.ಮಂಜು ಸ್ಮರಣ ಸಂಚಿಕೆ, ಸಾಹಿತಿ ಹಂಸಲೇಖ ಕವನಸಂಕಲನ ಬಿಡುಗಡೆ ಮಾಡುವರು. ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಪುಸ್ತಕ ಮಳಿಗೆ ಉದ್ಘಾಟಿಸುವರು.

ಚಿತ್ರಕಲಾ ಪ್ರದರ್ಶನವನ್ನು ಎಚ್‌.ಎಸ್‌. ವೆಂಕಟೇಶಮೂರ್ತಿ ಉದ್ಘಾಟಿಸುವರು. 3 ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಲೇಶರ್‌ ಶೋ ಇದೆ ಎಂದರು.

10ರಂದು ನಡೆಯುವ ಕವಿಗೋಷ್ಠಿಯಲ್ಲಿ 50 ಮಕ್ಕಳು ಕವನ ವಾಚನ ಮಾಡುವರು. ಸಾಹಿತಿ ಭಾನುಮುಷ್ತಾಕ್‌ ಸಮನ್ವಯಕಾರಾಗಿ ಕಾರ್ಯ ನಿರ್ವಹಿಸುವರು. ಸಂಜೆ 4.30ಕ್ಕೆ ಮಕ್ಕಳ ಸಾಹಿತಿ ನಾ.ಡಿಸೋಜಾ ಸಮಾರೋಪ ಭಾಷಣ ಮಾಡುವರು. ಸಾಧಕರಿಗೆ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್ ಸನ್ಮಾನಿಸುವರು.  ಎಂದು ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ವಿವಿರಿಸಿದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನ.ಅಶೋಕ್‌, ಯೋಗ ಗುರು ಸುರೇಶ್‌ ಅವರು ಕಾರ್ಯಕ್ರಮದಲ್ಲಿ ಇದ್ದರು.

*
ಮಕ್ಕಳ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಅಂಗೀಕರಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಕಳುಹಿಸಲಾಗುವುದು.
-ಎಚ್‌.ಎಲ್‌.ನಾಗರಾಜ್‌,
ಉಪ ವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT