ADVERTISEMENT

9 ಹಳ್ಳಿಗೆ ಮೂಲಸೌಕರ್ಯ ಶೀಘ್ರ

ಸಂಸದರ ಆದರ್ಶ ಗ್ರಾಮ ವ್ಯಾಪ್ತಿಗೆ ಕಟ್ಟೇಪುರ ಗ್ರಾಮ ಪಂಚಾಯಿತಿ; ಸಂಸದ ದೇವೇಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:48 IST
Last Updated 6 ಮಾರ್ಚ್ 2017, 10:48 IST
9 ಹಳ್ಳಿಗೆ ಮೂಲಸೌಕರ್ಯ ಶೀಘ್ರ
9 ಹಳ್ಳಿಗೆ ಮೂಲಸೌಕರ್ಯ ಶೀಘ್ರ   
ಕೊಣನೂರು: ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಉದ್ದೇಶದಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕಟ್ಟೇಪುರ ಗ್ರಾಮ ಪಂಚಾಯಿತಿ ಸೇರ್ಪಡೆಗೊಳಿಸಲಾಗಿದೆ ಎಂದು ಸಂಸದ ಎಚ್.ಡಿ.ದೇವೇಗೌಡ ಹೇಳಿದರು.
 
ಹೋಬಳಿಯ ಗೊಬ್ಬಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಆಂಜನೇಯ, ಬಸವೇಶ್ವರ, ಮಾಸ್ತಿ ಮಲ್ಲಮ್ಮ ದೇವರ ಮೂಲ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
 
ಬೇಲೂರು, ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರಿಲ್ಲದ ಕಾರಣ ಇವೆರಡು ಕ್ಷೇತ್ರಗಳಿಗೆ ಸಂಸದರ ನಿಧಿಯಿಂದ ಹೆಚ್ಚು ಅನುದಾನ ವ್ಯಯಿಸಬೇಕಾಗಿದೆ. ಆದರ್ಶ ಗ್ರಾಮ ಯೋಜನೆಯಡಿ 28 ಯೋಜನೆ ಒಳಗೊಂಡಿವೆ. ರಾಜ್ಯ ಸರ್ಕಾರ ಸೇರಿದಂತೆ ಯಾರ ಹಂಗಿಲ್ಲದೇ ಕಟ್ಟೇಪುರ ಪಂಚಾಯಿತಿ ವ್ಯಾಪ್ತಿಯ 9 ಹಳ್ಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಒಂದು ವಾರದ ಒಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
 
ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಧರ್ಮವನ್ನೂ ಕಾಪಾಡಲು ಸ್ವತಂತ್ರ್ಯ ಕಲ್ಪಿಸಲಾಗಿದೆ. ಆದರೆ, ದೇಶ ಆಳುವ ರಾಜಕೀಯ ಪಕ್ಷವೊಂದು ಏಕೈಕವಾದ ಧರ್ಮ, ಪಕ್ಷ ಇರಬೇಕೆಂದು ಪ್ರತಿಪಾದಿಸುತ್ತಿದೆ. ಜಾತ್ಯತೀತ ರಾಷ್ಟ್ರ ದಲ್ಲಿ ಇದೆಲ್ಲಾ ಸಾಧ್ಯವಾಗದು ಎಂದರು.
 
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ಯಾಕೇಟ್ ರೂಪದಲ್ಲಿ ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿ ನೀಡಲಾಗುತ್ತಿದೆ. ತಾಲೂಕಿನಲ್ಲಿ ಎರಡು ನದಿಗಳಿದ್ದರೂ ಕುಡಿಯಲು ನೀರಿಲ್ಲ. ಕೆರೆ– ಕಟ್ಟೆಗಳಿಗೆ ಜಲಾಶಯಗಳ ನೀರು ತುಂಬಿಸಿ ರೈತರ ಬೆಳೆಗೆ ಹರಿಸದೆ ತಮಿಳುನಾಡಿಗೆ ಬಿಟ್ಟು ಅನ್ಯಾಯ ಎಸಗಲಾಯಿತು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಕಟ್ಟೇಪುರ ರಸ್ತೆ ಅಭಿವೃದ್ಧಿ ಕಂಡಿಲ್ಲ. ಈ ಕಾರ್ಯಕ್ರಮಕ್ಕೆ ಶನಿವಾರ ಬಂದಿದ್ದ ಸಚಿವರು ನೀಡಿರುವ ಭರವಸೆ ಈಡೇರಿಸಬೇಕು ಎಂದರು.
 
ಲೌಕಿಕ ಸುಖಕ್ಕೆ ಒತ್ತು ನೀಡದೆ ಆಧ್ಯಾತ್ಮಿಕ ಜ್ಞಾನ ಬೆಳೆಸಿಕೊಂಡರೆ ಬದುಕಿನಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಉತ್ತಮ ಆಚಾರ- ವಿಚಾರಗಳಿಂದ ಶರೀರ ಶುದ್ಧಿಯಾಗಲಿದೆ. ಪ್ರತಿಯೊ ಬ್ಬರೂ ಸದ್ಗುಣ ಮೈಗೊಡಿಸಿಕೊಳ್ಳ ಬೇಕಿದೆ ಎಂದು ಸಲಹೆ ನೀಡಿದರು.
 
ಜಿ.ಪಂ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್, ಮಾಜಿ ಸದಸ್ಯ ಎಚ್.ಎಸ್. ಶಂಕರ್, ಜೆಡಿಎಸ್ ಪಿರಿಯಾಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ಮಹದೇವು, ಮುಖಂಡರಾದ ಹೊನ್ನ ವಳ್ಳಿ ಸತೀಶ್, ಫಾಲಾಕ್ಷ, ಕೃಷ್ಣೇಗೌಡ, ಕೆ.ಎಂ.ಮೋಹನ್, ಕೇರಳಾಪುರ ನಾಗೇಂದ್ರ, ಮುದ್ದನಹಳ್ಳಿ ರಮೇಶ್, ಎಂ.ಎಸ್.ಯೋಗೇಶ್, ಇಮ್ರಾನ್, ಸ್ವಾಮಿಗೌಡ, ಸೂರೇಗೌಡ, ಚಿತ್ರನಟ ಎಂ.ಎಸ್.ಸುರೇಶ್, ಕಟ್ಟೇಪುರ ಗ್ರಾ.ಪಂ ಅಧ್ಯಕ್ಷೆ ಮೋಸಿನಾ ಭಾನು, ಸದಸ್ಯರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.