ADVERTISEMENT

ಅಂಬಿಗರ ಚೌಡಯ್ಯ ಗದ್ದುಗೆ ಪೂಜೆ: ಗೊಂದಲ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 4:59 IST
Last Updated 6 ಸೆಪ್ಟೆಂಬರ್ 2017, 4:59 IST

ರಾಣೆಬೆನ್ನೂರು: ತಾಲ್ಲೂಕಿನ ಚೌಡಯ್ಯ ದಾನಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂ ಟಪಕ್ಕೆ ಅಂಬಿಗರ ಚೌಡಯ್ಯನವರ (ನರಸೀಪುರ) ಪೀಠದ
ಪೀಠಾಧಿಪತಿ ಶಾಂತಮುನಿ ಭೀಷ್ಮ ಚೌಡಯ್ಯ ಸ್ವಾಮೀಜಿ ಪೂಜೆ ಸಲ್ಲಿಸಲು ಕುರಿತು ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ತೆರೆ ಬಿತ್ತು.

ಚೌಡಯ್ಯದಾನಪುರಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪಿ.ಎನ್‌. ಲೋಕೇಶ ಸೌಹಾರ್ದಯುತವಾಗಿ ಬಗೆ ಹರಿಸಿ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಈ ಬಗ್ಗೆ ಗ್ರಾಮಸ್ಥರು ಮತ್ತು ಅಂಬಿಗರ ಚೌಡಯ್ಯನವರ ಪೀಠದವರ ನಡುವೆ ಒಂದು ವಾರದಿಂದ ಜಿಲ್ಲೆಯಾದ್ಯಂತ ತೀವ್ರವಾಗಿ ಚರ್ಚೆ ನಡೆದಿತ್ತು.

ಗ್ರಾಮೀಣ ಠಾಣೆಯಲ್ಲಿ ತಹಶೀಲ್ದಾರ್ ರಾಮಮೂರ್ತಿ ಮತ್ತು ಸಿಪಿಐ ಮರುಳಸಿದ್ದಪ್ಪ ಅವರ ನೇತೃತ್ವದಲ್ಲಿ ಎರಡು ಕಡೆಯವರನ್ನು ಕರೆಸಿ ಎರಡು ಬಾರಿ ಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದ್ದರು.

ADVERTISEMENT

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ ಅವರು ಮಂಗಳವಾರ ರಾಣೆಬೆನ್ನೂರಿನ ಗ್ರಾಮೀಣ ಠಾಣೆಯಲ್ಲಿ ಎರಡೂ ಸಮಿತಿ ಸಭೆ ಕರೆದಿದ್ದರು. ಚೌಡಯ್ಯದಾನಪುರದ ಗ್ರಾಮಸ್ಥರು ಸಭೆಗೆ ಬಾರದ ಕಾರಣ ಉಪವಿಭಾಗಾಧಿಕಾರಿಯೇ ಚೌಡಯ್ಯದಾನ ಪುರಕ್ಕೆ ತೆರಳಿದರು.

ಗ್ರಾಮಸ್ಥರು ಮತ್ತು ಅಂಬಿಗರ ಚೌಡ ಯ್ಯನವರ ಪೀಠದ ಸಮಿತಿ ಪದಾಧಿ ಕಾರಿಗಳ ಅವರ ಜೊತೆಗೆ ಸುದೀರ್ಘವಾಗಿ ಚರ್ಚಿಸಿದರು. ಚೌಡಯ್ಯದಾನ ಪುರದ ಗ್ರಾಮದ ಮುಖಂಡರು ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ‘ಅಂಬಿಗರ ಚೌಡಯ್ಯನವರ ಪೀಠದ ಸ್ವಾಮೀಜಿ ಸೇರಿದಂತೆ ಎಲ್ಲರೂ ಚೌಡಯ್ಯದಾನಪುರದ ಅರ್ಚಕರೊಂದಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಿಕೊಂಡು ಹೋಗ ಬಹುದು. ಪುರಾತನ ಇತಿಹಾಸ ಹೊಂದಿದ ನಮ್ಮ ಒಡೆಯರ ಸಂಸ್ಥಾನ ಮಠದ ಸಂಪ್ರದಾಯಗಳಿಗೆ ತೊಂದರೆ ಕೊಡದಂತೆ ಇಲ್ಲಿನ ಅರ್ಚಕರೊಂದಿಗೆ ಪೂಜೆ ಮಾಡಿಕೊಂಡು ಹೋಗಲಿ’ ಎಂದು ತಿಳಿಸಿದಾಗ ಗ್ರಾಮಸ್ಥರು ಉಪ ವಿಭಾಗಾಧಿಕಾರಿಗಳಿಗೆ ಒಪ್ಪಿಗೆ ನೀಡಿದರು.

ನಂತರ ಉಪವಿಭಾಗಾಧಿಕಾರಿ ಲೋಕೇಶ ಅವರು ಅಂಬಿಗರ ಚೌಡಯ್ಯ ಪೀಠದ ಶಾಂತಮುನಿ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರಿಗೆ ಮಂಟಪದ ದರ್ಶನ, ಪೂಜೆ  ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.

ಬುಧವಾರ ಹುಣ್ಣಿಮೆ ದಿನ ಪೂಜೆಗೆ ಬರಬೇಕಿದ್ದ ಅಂಬಿಗರ ಚೌಡಯ್ಯ ಪೀಠದ ಸ್ವಾಮೀಜಿ ಉಪವಿಭಾಗಾಧಿಕಾರಿ ಸೂಚನೆಯಂತೆ ಮಂಗಳವಾರ ಸಂಜೆಯೇ ತುಂಗಭದ್ರಾ ನದಿ ತೀರದ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪಕ್ಕೆ ತೆರಳಿ ಅಲ್ಲಿನ ಅರ್ಚಕರೊಂದಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಗೊಂದಲಕ್ಕೆ ತೆರೆ ಎಳೆದರು.

ಡಿವೈಎಸ್‌ಪಿ ನಾರಾಯಣ ಭರಮನಿ, ತಹಶೀಲ್ದಾರ್‌ ರಾಮಮೂರ್ತಿ, ಡಿಎಸ್‌ಪಿ ಅನಿಲಕುಮಾರ ಭೂಮರಡ್ಡಿ ಹಾಗೂ ನರಸೀಪುರ ಅಂಬಿಗರ ಚೌಡಯ್ಯನವರ ಪೀಠದ ರಾಮಚಂದ್ರಪ್ಪ ಐರಣಿ, ಫಕ್ಕೀ ರಪ್ಪ ತುಮ್ಮಿನಕಟ್ಟಿ, ಕೃಷ್ಣಮೂರ್ತಿ ವಡ್ಡಿನ ಕೊಪ್ಪ, ಮಾಲತೇಶ, ಮಂಜುನಾಥ ಬೋವಿ ಹಾಗೂ ಚೌಡಯ್ಯದಾನಪುರದ ಬಸಯ್ಯ ಪೂಜಾರ, ವೀರಪ್ಪ ಅಕ್ಕೂರ, ವೀರಭದ್ರಪ್ಪ ದೀಪಾವಳಿ, ಸಂಕಪ್ಪ ಅರಸಪ್ಪನವರ, ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ದೀಪಾವಳಿ, ಸಣ್ಣಪ್ಪ ಕರೆಹೊನ್ನಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.