ADVERTISEMENT

‘ಆತ್ಮಾವಲೋಕನದಿಂದ ಸದೃಢ ಸಮಾಜ’

‘ನಾಗರಿಕರ ಮೂಲಭೂತ ಕರ್ತವ್ಯಗಳ ವಿಚಾರ ಸಂಕಿರಣ’ ಉದ್ಘಾಟಿಸಿದ ಈಶಪ್ಪ ಭೂತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:05 IST
Last Updated 9 ಮಾರ್ಚ್ 2017, 11:05 IST
ಹಾವೇರಿ: ‘ಪ್ರತಿಯೊಬ್ಬರು ತಮ್ಮ ಕರ್ತವ್ಯಗಳ ಬಗ್ಗೆ ತಮ್ಮನ್ನು ತಾವು ಮೊದಲು ಪ್ರಶ್ನಿಸಿಕೊಳ್ಳಬೇಕು. ನಂತರ ಅವುಗಳ ಕುರಿತು ಅರಿತು ನಡೆದರೆ ಮಾತ್ರ, ಸ್ವಾಸ್ಥ್ಯ ಸಮಾಜ ನಿರ್ಮಾಣ ವಾಗಲು ಸಾಧ್ಯ’ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
 
ಇಲ್ಲಿನ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಡೆದ ‘ನಾಗರಿಕರ ಮೂಲಭೂತ ಕರ್ತವ್ಯಗಳ ಕುರಿತ ವಿಚಾರ ಸಂಕಿರಣ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
 
‘ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನಾವು ಬಯಸುವ ಬದಲಾವಣೆಗಳನ್ನು, ಮೊದಲು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ, ಬೇರೆಯವರು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ’ ಎಂದರು.
 
‘ಇಂದು ಎಲ್ಲ ರಂಗಗಳಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚು ಸ್ಪರ್ಧೆ ಏರ್ಪಡುತ್ತಿದೆ. ಆದ್ದರಿಂದ, ಮಹಿಳೆಯರು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದರು.
‘ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತಿದ್ದೇವೆ. ನಮ್ಮ ಸ್ವಾರ್ಥಕ್ಕಾಗಿ ಅರಣ್ಯಕ್ಕೆ ಬೆಂಕಿ ಇಟ್ಟು, ಅರಣ್ಯವನ್ನು ಒತ್ತುವರಿ ಮಾಡಿಕೊಳ್ಳುವ ಹೀನ ಕೃತ್ಯಗಳು ಹೆಚ್ಚಾಗುತ್ತಿವೆ.
 
ನಮಗೆ ಅವಶ್ಯಕವಾಗಿ ಬೇಕಾಗಿದ್ದ ಪರಿಸರವನ್ನೇ ನಾಶ ಮಾಡುವ ಮೂಲಕ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ನಾವೇ ಹಾಳು ಮಾಡುತ್ತಿದ್ದೇವೆ.
ಮುಂದೆ ಮಕ್ಕಳಿಗೆ ಪ್ಲಾಸ್ಟಿಕ್ ಮರಗಳನ್ನು ತೊರಿಸಿ, ಅವುಗಳ ಬಗ್ಗೆ ವಿವರ ನೀಡುವ ಸ್ಥಿತಿ ಎದುರಾಗಬಹುದು’ ಎಂದು ಎಚ್ಚರಿಸಿದರು. ಪ್ರಾಧ್ಯಾಪಕ ಅರುಣಕುಮಾರ ಚಂದನ್ ಮಾತನಾಡಿ, ‘ಇಂದು ನಮ್ಮ ಮೂಲಭೂತ ಹಕ್ಕುಗಳನ್ನು ಮಾತ್ರ ಪ್ರತಿಪಾದಿಸುತ್ತಿದ್ದು, ಮೂಲ ಕರ್ತವ್ಯ ಗಳನ್ನು ಮರೆಯುತ್ತಿದ್ದೇವೆ’ ಎಂದರು.
 
‘ರಾಷ್ಟ್ರಾಭಿಮಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಗೌರವ, ಸಂವಿಧಾನ ವನ್ನು ಪಾಲಿಸುವುದರ ಜೊತೆಗೆ ಅದರ ಆಶಯಗಳನ್ನು ಗೌರವಿಸುವುದು ಎಲ್ಲ ನಾಗರಿಕರ ಕರ್ತವ್ಯ. ದೇಶದ ರಕ್ಷಣೆ, ಭ್ರಾತೃತ್ವ, ಏಕತೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವುದರ ಜೊತೆಗೆ ಪರಿಸರ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡಬೇಕಿದೆ’ ಎಂದರು.
 
ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯದರ್ಶಿ ವಿ.ವಿ.ಅಂಗಡಿ ಮಾತ ನಾಡಿ, ‘ಸಂಸ್ಕಾರ ಇಲ್ಲದ ಶಿಕ್ಷಣ, ನೀತಿ ಇಲ್ಲದ ರಾಜಕಾರಣವನ್ನು ನಿರಾಕರಿಸಿ, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಹಾಗೂ ನೈತಿಕ ತಳಹದಿಯ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ನಾವೆಲ್ಲ ಕಂಕಣಬದ್ಧರಾಗಬೇಕು’ ಎಂದರು.
 
ಶಿವಲಿಂಗೇಶ್ವರ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ.ಸವಿತಾ ಎಸ್. ಹಿರೇಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಪಲ್ಲೇದ ರವೀಂದ್ರ, ನಗರ ಪೊಲೀಸ್ ಠಾಣೆಯ ವಿ.ಪಿ.ಪಡಪದ,  ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಕುಳಗಟ್ಟೆ, ಅಶ್ವಿನಿ ಮಜ್ಜಗಿ, ಶ್ರುತಿ ಕೋಟೆಬಾಗಾರ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.