ADVERTISEMENT

ಇಂಟರ್‌ಸಿಟಿ ರೈಲು ನಿಲುಗಡೆಗೆ ಆಗ್ರಹ

ಬ್ಯಾಡಗಿ: ರೈಲು ನಿಲ್ಲದಿದ್ದರೆ ಉಗ್ರ ಹೋರಾಟ– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:52 IST
Last Updated 9 ಜನವರಿ 2017, 8:52 IST
ಬ್ಯಾಡಗಿ: ‘ಇಲ್ಲಿನ ರೈಲು ನಿಲ್ದಾಣದಲ್ಲಿ ಧಾರವಾಡ–ಮೈಸೂರು ಇಂಟರ್ ಸಿಟಿ ರೈಲು ಇದೇ 17ರಿಂದ ನಿಲುಗಡೆಗೆ ಆದೇಶ ಹೊರಬೀಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ತಾಲ್ಲೂಕಾ ರೈಲ್ವೆ ಸುಧಾರಣೆ ಹಾಗೂ ಪ್ರಯಾಣಿಕರ  ಕ್ಷೇಮಾಭಿವೃದ್ಧಿ ಸಮಿತಿ ಮತ್ತು ರೋಟರಿ ಕ್ಲಬ್‌ ಸದಸ್ಯರು  ಎಚ್ಚರಿಸಿದ್ದಾರೆ.
 
ಈ ಕುರಿತು ಸಂಸದ ಶಿವಕುಮಾರ ಉದಾಸಿ ಅವರಿಗೆ ಶನಿವಾರ ಅವರು ಮನವಿ ಸಲ್ಲಿಸಿದ್ದಾರೆ.
 
‘ಮೆಣಸಿನಕಾಯಿ ವ್ಯಾಪಾರಕ್ಕೆ ಹೆಸರಾದ ಬ್ಯಾಡಗಿಯಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ಮನವಿ ಸಲ್ಲಿಸುವುದು, ಆಗ್ರಹಿಸುವುದು ನಡೆಯುತ್ತಿದೆ. ಕಳೆದ 2 ತಿಂಗಳ ಹಿಂದೆಯೂ ಸಂಸದ ಶಿವಕುಮಾರ ಉದಾಸಿ ಹಾಗೂ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಯಲವಿಗಿ ಹಾಗೂ ಅಜ್ಜಂಪುರದಂಥ ಚಿಕ್ಕ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಆದೇಶ ಸಿಕ್ಕಿದೆ. ಆದರೆ, ಇಲ್ಲಿ ರೈಲು ನಿಲುಗಡೆ ಯಾಕೆ ಆದೇಶ ಬರಲಿಲ್ಲ’ ಎಂದು ತಾಲ್ಲೂಕಾ ರೈಲ್ವೆ ಸುಧಾರಣೆ ಹಾಗೂ ಪ್ರಯಾಣಿಕರ  ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಪ್ರಕಾಶ ಭಸ್ಮೆ ಪ್ರಶ್ನಿಸಿದ್ದಾರೆ.
 
‘ರೈತರು, ವ್ಯಾಪಾರಸ್ಥರ ಹಿತದೃಷ್ಠಿಯಿಂದ ಬ್ಯಾಡಗಿ ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಗೆ ಆದೇಶ ಹೊರಡಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕು’ ಎಂದು ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಒತ್ತಾಯಿಸಿದರು. 
 
2 ತಿಂಗಳು ಕೊಡಿ: ‘ಬ್ಯಾಡಗಿ ಹಾಗೂ ಯಲವಿಗಿ ರೈಲು ನಿಲ್ದಾಣಗಳಲ್ಲಿ ಧಾರವಾಡ–ಮೈಸೂರು ಇಂಟರ್‌ಸಿಟಿ ರೈಲು ನಿಲುಗಡೆ ಆಗಬೇಕಾಗಿತ್ತು. ಆದರೆ ಯಲವಿಗಿಯಲ್ಲಿ ಮಾತ್ರ ನಿಲುಗಡೆಯಾಗಲು ಆದೇಶವಾಗಿದೆ. ಬ್ಯಾಡಗಿಯಲ್ಲಿಯೂ ಸಹ ನಿಲುಗಡೆ ಮಾಡುವಂತೆ ಅಧಿಕಾರಿಗಳೊಂದಿಗೆ ಚರ್ಚಸಲು ನನಗೆ ಎರಡು ತಿಂಗಳು ಕಾಲಾವಕಾಶ ಬೇಕಾಗಿದೆ. ಅಲ್ಲಿಯವರೆಗೆ ಬ್ಯಾಡಗಿ ಜನತೆ ಶಾಂತವಾಗಿರಿ’ ಎಂದು ಸಂಸದ ಶಿವಕುಮಾರ ಉದಾಸಿ ಮನವಿ ಮಾಡಿದ್ದಾರೆ.
 ರೋಟರಿ ಕ್ಲಬ್‌ ಅಧ್ಯಕ್ಷ ಸುರೇಶ ಗೌಡರ, ಕಾರ್ಯದರ್ಶಿ ಕಿರಣ ವೆರ್ಣೇಕರ, ಮಾಜಿ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ ಸೇರಿದಂತೆ ಮತ್ತಿತರರಿದ್ದರು. 
 
***
ಅಂತರರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆಯ ಅಗತ್ಯವಿದೆ
-ಸಿ.ಡಿ ಅರಳಿಕಟ್ಟಿ
ನಿವೃತ್ತ ಅಧೀಕ್ಷಕರು ಎಂಎಎಸ್‌ಸಿ ಪದವಿ ಕಾಲೇಜು, ಹಂಸಭಾವಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.