ADVERTISEMENT

ಒಪ್ಪಿಗೆ ಇಲ್ಲದೇ ‘ಆಡಳಿತ ಭವನ’ಕ್ಕೆ ಅನುದಾನ ಬಳಕೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:24 IST
Last Updated 16 ಮೇ 2017, 6:24 IST
ಹಾವೇರಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸೋಮವಾರ ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತಿರುವ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ. ಸಿಇಓ ಕೆ.ಬಿ. ಆಂಜನಪ್ಪ, ಉಪಾಧ್ಯಕ್ಷೆ ಮಮತಾಜ್ ಬೀ ತಡಸ ಇದ್ದಾರೆ (
ಹಾವೇರಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸೋಮವಾರ ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತಿರುವ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ. ಸಿಇಓ ಕೆ.ಬಿ. ಆಂಜನಪ್ಪ, ಉಪಾಧ್ಯಕ್ಷೆ ಮಮತಾಜ್ ಬೀ ತಡಸ ಇದ್ದಾರೆ (   

ಹಾವೇರಿ: ‘ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿ ಒಪ್ಪಿಗೆ ಪಡೆಯದೇ ನಿಯಮ ಬಾಹಿರವಾಗಿ ‘ಆಡಳಿತ ಭವನ’ಕ್ಕೆ ಹಣ ಖರ್ಚು ಮಾಡಲಾಗುತ್ತಿದೆ’ ಎಂದು ಇಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಸನಗೌಡ ದೇಸಾಯಿ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದರು.

‘₹3 ಕೋಟಿ ವೆಚ್ಚದ ಕಾಮಗಾರಿಗೆ ಸದನ ಒಪ್ಪಿಗೆ ನೀಡಿತ್ತು. ಆದರೆ, ಹೆಚ್ಚುವರಿಯಾಗಿ ₹75 ಲಕ್ಷ ನೀಡಲಾಗಿದೆ. ಅನಂತರ ₹42 ಲಕ್ಷ ಬಿಡುಗಡೆ ಹಾಗೂ ₹83 ಲಕ್ಷ ನೀಡಲು ಯೋಜನೆ ರೂಪಿಸಲಾಗಿದೆ.  ₹2 ಕೋಟಿಯನ್ನು ಕಾನೂನು ಬಾಹಿರವಾಗಿ  ಬಳಸಲು ಉದ್ದೇಶಿಸಲಾಗಿದೆ. ಕಟ್ಟಡಕ್ಕೆ ಬಳಸಿದ ಖರ್ಚಿನ ಬಗ್ಗೆ ಪರಿಶೀಲನೆ, ಲೆಕ್ಕ ಪರಿಶೋಧನೆ ನಡೆಸಿ’ ಎಂದು ಬಸನಗೌಡ ಆಗ್ರಹಿಸಿದರು.

ಸದಸ್ಯ ಏಕನಾಥ ಭಾನವಳ್ಳಿ ಮಾತನಾಡಿ, ‘ಸ್ಥಾಯಿ ಸಮಿತಿ ಮತ್ತು ಸದಸ್ಯರ ಗಮನಕ್ಕೆ ತಾರದೇ ಹಣ ಖರ್ಚು ಮಾಡುವುದನ್ನು ಖಂಡಿಸುತ್ತೇವೆ. ನಿಯಮಾವಳಿ ಪ್ರಕಾರವೇ ಹಣ ವಿನಿಯೋಗಿಸಿ’ ಎಂದರು. ‘₹5 ಲಕ್ಷ ಖರ್ಚು ಮಾಡಬೇಕಿದ್ದರೂ ಟೆಂಡರ್ ಕರೆಯಬೇಕು.

ADVERTISEMENT

ನೀವು ಎಲ್ಲಿ, ಯಾವಾಗ ಟೆಂಡರ್‌ಗಳ  ಜಾಹೀರಾತು ಪ್ರಕಟಿಸಿದ್ದೀರಿ?’ ಎಂದರು.‘ಕಟ್ಟಡಕ್ಕೆ ಕೆಲವು ಸೇರ್ಪಡೆಗಳನ್ನು ಮಾಡುವಂತೆ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದರು. ಅದರನ್ವಯ  ₹1.3 ಕೋಟಿಯ ಅಂದಾಜು ಪಟ್ಟಿಯನ್ನು ಎಂಜಿನಿಯರ್‌ ತಯಾರಿಸಿದ್ದರು. ಈ ಪೈಕಿ ₹75 ಲಕ್ಷಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ’ ಎಂದು ಸಿಇಒ ಕೆ.ಬಿ. ಆಂಜನಪ್ಪ ಉತ್ತರಿಸಿದರು.

‘ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕಾದ ಹಣವನ್ನು ಸದಸ್ಯರ ಗಮನಕ್ಕೂ ತಾರದೇ ಖರ್ಚು ಮಾಡುವ ಮೂಲಕ ಜಿಲ್ಲೆಯ ಜನತೆಗೆ ಅನ್ಯಾಯ ಎಸಗಿದ್ದೀರಿ. ಸದಸ್ಯರೇನು ಷೋಕಿಗಾಗಿ ಸಭೆಗೆ ಬರಬೇಕಾ?’ ಎಂದು ಸದಸ್ಯ ಪ್ರಕಾಶ್ ಬನ್ನಿಕೋಡ ಗರಂ ಆಗಿ ಕೇಳಿದರು.

‘ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯುವ ತನಕ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಬಾರದು’ ಎಂದು ಸದಸ್ಯ ಬಸನಗೌಡ ದೇಸಾಯಿ, ಪ್ರಕಾಶ್ ಬನ್ನಿಕೋಡ, ಏಕನಾಥ ಭಾನವಳ್ಳಿ, ಮಾಲತೇಶ ಸೊಪ್ಪಿನ, ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ ಸೇರಿದಂತೆ ಸದಸ್ಯರೆಲ್ಲ ಆಗ್ರಹಿಸಿದರು.

ಬೆಳೆ ವಿಮೆ– ಪರಿಹಾರ: ಬೆಳೆ ವಿಮೆ ಮತ್ತು ಪರಿಹಾರದ ವಿತರಣೆಯಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ ಹೆಚ್ಚಿದೆ. ಆದರೆ, ಕಂದಾಯ ಇಲಾಖೆಯ ಪ್ರತಿನಿಧಿಗಳೇ ಸಭೆಗೆ ಹಾಜರಾಗುತ್ತಿಲ್ಲ’ ಎಂದುಶಿವರಾಜ ಹರಿಜನ, ನೀಲಪ್ಪ ಎಂ. ಈಟೇರ, ಕರಿಯಪ್ಪ ಕರಿಯಣ್ಣನವರ, ಟಾಕನಗೌಡ ಮತ್ತಿತರರು ದೂರಿದರು.

ಮುಂದಿನ ಸಭೆಗಳಿಗೆ ಪ್ರತಿನಿಧಿಯನ್ನು ಕಳುಹಿಸಿಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲು ಸಭೆ ನಿರ್ಣಯಿಸಿತು.‘ಬಾಕಿ ಉಳಿದಿರುವ ಬೆಳೆ ವಿಮೆ ಹಣವನ್ನು ವಾರದೊಳಗೆ ವಿತರಣೆ ಮಾಡಲಾಗುವುದು’ ಎಂದು ಲೀಡ್ ಬ್ಯಾಂಕ್ ಪ್ರಬಂಧಕ ಕದರಪ್ಪ ಸಭೆಗೆ ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರವನ್ನು ತೆರೆದಿಲ್ಲ’ ಎಂದು ಕರಿಯಪ್ಪ ಕರಿಯಣ್ಣನವರ ದೂರಿದರು. ‘ಏಜನ್ಸಿಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ’ ಎಂದು ಕೃಷಿ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ಸ್ಪಷ್ಟ ಪಡಿಸಿದರು.

ಶಿಥಿಲಗೊಂಡ ಕಟ್ಟಡ: ‘ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಕ್ರಮಕೈಗೊಳ್ಳಬೇಕು’ ಎಂದು ಸದಸ್ಯರು ಪಟ್ಟು ಹಿಡಿದರು. ‘ಸತತ ನಾಲ್ಕು ವರ್ಷಗಳಿಂದ ಬೇಡಿಕೆ ಕಳುಹಿಸಿದರೂ ಅನುದಾನ ಮಂಜೂರಾಗಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವನಗೌಡ ಪಾಟೀಲ ಸ್ಪಷ್ಟನೆ ನೀಡಿದರು.

ಮಧ್ಯ ಪ್ರವೇಶಿಸಿದ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ‘ಸರ್ಕಾರ ಮಂಜೂರು ಮಾಡಬೇಕಾದ ಅನುದಾನಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ವಾಗ್ದಾಳಿ ಮಾಡಿ ಏನು ಪ್ರಯೋಜನ?’ ಎಂದರು.

ಕೋಳಿವಾಡರ ಹೆಸರು: ನೂತನ ಆಡಳಿತ ಭವನಕ್ಕೆ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಹೆಸರು ಇಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ ಕೆ.ಬಿ. ಆಂಜನಪ್ಪ, ‘ಸಭಾಂಗಣಗಳಿಗೆ ಹೆಸರು ಇಡುತ್ತಾರೆ. ಆದರೆ, ಆಡಳಿತ ಭವನಕ್ಕೆ ಹೆಸರು ಇಡುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಸದಸ್ಯರ ಬೇಡಿಕೆಯನ್ನು  ಸರ್ಕಾರದ ಪರಿಶೀಲನೆಗೆ ಕಳುಹಿಸಲಾಗುವುದು’ ಎಂದರು.

ಇದಕ್ಕೂ ಮೊದಲು ಮಾತನಾಡಿದ ಸದಸ್ಯ ಸಿದ್ದರಾಜ ಕಲಕೋಟಿ, ‘ಕೆರೆ ಸಂಜೀವಿನಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮತಾಜ್ ಬೀ ತಡಸ, ಉಪಕಾರ್ಯದರ್ಶಿ ಜಿ. ಗೋವಿಂದ ಸ್ವಾಮಿ ಇದ್ದರು.

‘ಕಡತದಲ್ಲೇ ಹೂಳೆತ್ತುವ ಸಂಭ್ರಮ’

ಜಿಲ್ಲೆಯಲ್ಲಿ ಕೆರೆಗಳನ್ನು ಹೂಳೆತ್ತುವ ಕಾಮಗಾರಿಗೆ ಲಕ್ಷಗಟ್ಟಲೆ ಹಣ ನಿಗದಿ ಮಾಡುತ್ತಾರೆ. ಆದರೆ, ಕಾಮಗಾರಿ ವಿಳಂಬ ಮಾಡಿ, ಶೇ 25ರಷ್ಟು ಕೆಲಸ ಮುಗಿಸುತ್ತಾರೆ. ಮಳೆಗೆ ಕೆರೆ ತುಂಬಿದ ಕೂಡಲೇ ಪೂರ್ಣ ಬಿಡುಗಡೆ ಮಾಡುತ್ತಾರೆ.

ನಮ್ಮ ಜಿಲ್ಲೆಯಲ್ಲಿ ‘ಕಡತದಲ್ಲಿ ಕೆರೆ ಹೂಳೆತ್ತುವುದೇ’ ಸಂಭ್ರಮದ ಕೆಲಸವಾಗಿದೆ’ ಎಂದು ಸದಸ್ಯ ಕರಿಯಪ್ಪ ಕರಿಣ್ಣನವರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಆರೋಪಿಸಿದರು.

‘ತಿಂಗಳಲ್ಲಿ ಕ್ರಮ’
‘ಬೇರೆ ಜಿಲ್ಲೆಗಳಲ್ಲಿ ಜನ ಔಷಧಿ ಮಳಿಗೆಗಳು ಆರಂಭಗೊಂಡಿವೆ. ನಮ್ಮಲ್ಲಿ ಜಾಗ, ಅನುಮೋದನೆ ನೀಡಿದರೂ ವಿಳಂಬವಾಗುತ್ತಿದೆ’ ಎಂಬ ಸದಸ್ಯರ ಆರೋಪಕ್ಕೆ ಸ್ಪಂದಿಸಿದ ಅಧ್ಯಕ್ಷ ಬಸೇಗಣ್ಣಿ, ‘ತಿಂಗಳಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಜನ ಔಷಧಿ ಮಳಿಗೆ ಆರಂಭಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ ಬಡ್ಡಿ ಅವರಿಗೆ ಸೂಚಿಸಿದರು.

‘ಯುಟಿಪಿ ಸಮಸ್ಯೆ: ಸಭೆ ಕರೆಯಿರಿ’

‘ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ)ಯ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಸಿಇಓ ಸಮ್ಮುಖದಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ಜಿಲ್ಲಾ ಪಂಚಾಯ್ತಿ ಸದಸ್ಯರ  ಸಭೆ ಆಯೋಜಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಶಾಸಕ ಬಸವರಾಜ ಶಿವಣ್ಣನವರ ಸೂಚಿಸಿದರು.

ಧ್ವನಿ ವರ್ಧಕ ಅವ್ಯವಸ್ಥೆ:  ಜಿಲ್ಲಾ ಪಂಚಾಯ್ತಿ ಸಭಾಭವನದ ಧ್ವನಿ ಹಾಗೂ ವಿದ್ಯುತ್ ಅವ್ಯವಸ್ಥೆಗಳಿಗೆ ಸೋಮವಾರದ ಸಭೆಯೂ ಸಾಕ್ಷಿಯಾಯಿತು. ಮಾತನಾಡುವ ಸದಸ್ಯರ ಧ್ವನಿ ಕರ್ಕಶವಾಗಿ ಕೇಳುತ್ತಿತ್ತು. ಅಲ್ಲದೇ, ಪದೇ ಪದೇ ವಿದ್ಯುತ್ ಕೈಕೊಟ್ಟಿತ್ತು. ಈ ನಡುವೆಯೇ ಸಭೆಯಲ್ಲಿ ಇಟ್ಟಿದ್ದ ಫ್ಯಾನೊಂದು ‘ಟಂ’ ಎಂದು ಶಬ್ದವಾಗಿ ಬೆಂಕಿ ಹೊತ್ತಿಕೊಂಡಿತು. ಹೆಚ್ಚಿನ ಹಾನಿ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.