ADVERTISEMENT

ಕರ್ತವ್ಯದಲ್ಲಿ ನಿಷ್ಠೆ ಇರಲಿ, ಸಬೂಬು ಬೇಡ

ಸಚಿವ ಸಂಪುಟ ಉಪಸಮಿತಿ: ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 12:14 IST
Last Updated 12 ಮೇ 2017, 12:14 IST
ಕರ್ತವ್ಯದಲ್ಲಿ ನಿಷ್ಠೆ ಇರಲಿ, ಸಬೂಬು ಬೇಡ
ಕರ್ತವ್ಯದಲ್ಲಿ ನಿಷ್ಠೆ ಇರಲಿ, ಸಬೂಬು ಬೇಡ   
ಹಾವೇರಿ: ‘ಅಧಿಕಾರಿಗಳಿಗೆ ನಿಷ್ಠೆ ಬೇಕು. ‘ಬರ’ದಲ್ಲಿ ಹೆಚ್ಚಿನ ಜವಾಬ್ದಾರಿ ಇರಬೇಕು. ಸಬೂಬು ಹೇಳಿಕೊಂಡು ಕರ್ತವ್ಯ ನಿರ್ಲಕ್ಷಿಸಬಾರದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಎಚ್ಚರಿಕೆ ನೀಡಿದರು. 
 
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ಸಚಿವ ಸಂಪುಟ ಉಪಸಮಿತಿಯ ಬರ ಪರಿಶೀಲನಾ ಸಭೆ ನಡೆಸಿದ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಜಿಲ್ಲೆಯ ಪ್ರಗತಿ ಕುಂಠಿತಗೊಂಡ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 
 
‘ನರೇಗಾ’ ಅಡಿಯಲ್ಲಿ ಶೇ 2.82 ಮಾನವ ದಿನಗಳು ಹಾಗೂ ಶೇ 1.78 ಆರ್ಥಿಕ ಪ್ರಗತಿ ಆಗಿರುವ ಬಗ್ಗೆ ಸಚಿವರು ಕಾರಣ ಕೇಳಿದರು. ಪ್ರತಿಕ್ರಿಯಿಸಿದ ಸಿಇಓ ಕೆ.ಬಿ. ಆಂಜನಪ್ಪ, ‘ಲೋಕಾಯುಕ್ತ ತನಿಖೆ’ಯ ಕಾರಣ ಹೇಳಿಕೊಂಡು ಪಿಡಿಓಗಳು ಕಾರ್ಯ ನಿರ್ವಹಿಸಿಲ್ಲ’ ಎಂದರು. 
 
ಇದರಿಂದ ಇನ್ನಷ್ಟು ಅಸಮಾಧಾನಗೊಂಡ ಸಚಿವರು, ‘ನಮ್ಮ ಮೇಲೆ ಪ್ರತಿನಿತ್ಯ ಆರೋಪ ಮಾಡುತ್ತಾರೆ. ಅಂದ ಮಾತ್ರಕ್ಕೆ ಕೆಲಸ ಮಾಡುವುದನ್ನೇ ನಿಲ್ಲಿಸಿದ್ದೇವೆಯೇ?, ನಮ್ಮಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳಬೇಕು. ತಪ್ಪು ಮಾಡದೇ ಇದ್ದರೆ ಭಯ ಏಕೆ? ಕೆಲಸ ಮಾಡಲು ನಿಷ್ಠೆ ಮುಖ್ಯ. ಸಬೂಬುಗಳಲ್ಲ’ ಎಂದು ಖಾರವಾಗಿ ಉತ್ತರಿಸಿದರು. 
 
‘ಬರ’ದಲ್ಲಿರುವ ಜನತೆಗೆ ಉದ್ಯೋಗ ನೀಡುವುದು ಸರ್ಕಾರದ ಉದ್ದೇಶ. ಇದರಲ್ಲಿ ಜಿಲ್ಲಾ ಪಂಚಾಯ್ತಿ ವಿಫಲವಾಗಿರುವುದು ದುರ್ದೈವ’ ಎಂದರು. 
‘ಪಿಡಿಓಗಳು ಪ್ರಾಮಾಣಿಕರಾಗಿದ್ದರೆ, ಏಕೆ ಹೆದರಬೇಕು? ಪ್ರಗತಿ ತೋರದ ಪಿಡಿಓಗಳ ವಿರುದ್ಧ ಕ್ರಮಕೈಗೊಂಡು ವರದಿ ನೀಡಿ’ ಎಂದು ಸಿಇಓ ಅವರಿಗೆ ಸಚಿವರು ಸೂಚಿಸಿದರು. 
 
‘ಪಿಡಿಓಗಳ ಸಮಸ್ಯೆ ಬಗೆಹರಿಸಲು ಸರ್ಕಾರದ ಬಳಿ ನಿಯೋಗ ಒಯ್ಯಲಾಗಿದೆ. ಇನ್ನು ಇವರಿಗೆ ಉಪ್ಪು– ನಿಂಬೆಹುಳಿ ಇಟ್ಟು ಪೂಜೆ ಮಾಡಬೇಕಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಗರಂ ಆಗಿ ನುಡಿದರು. 
 
‘ಅಧಿಕಾರಿಗಳಿಗೆ ಒಂದಕ್ಕಿಂತ ಹೆಚ್ಚು ಹುದ್ದೆಗಳ ಹೊಣೆ ಇದೆ’ ಎಂಬ ತಾಲ್ಲೂಕು ಪಂಚಾಯ್ತಿ ಸದಸ್ಯರೊಬ್ಬರ ಹೇಳಿಕೆಯಿಂದ ಸಿಟ್ಟಿಗೆದ್ದ ಸಚಿವ ಆರ್.ವಿ. ದೇಶಪಾಂಡೆ, ‘ನನ್ನ ಬಳಿ ಎರಡು ಖಾತೆಗಳಿವೆ. ಸಮಯ ಹೊಂದಾಣಿಕೆ ಮಾಡಿಕೊಂಡು ಕಷ್ಟದಲ್ಲಿರುವ ಜನರಿಗಾಗಿ ಎರಡು ಗಂಟೆ ಹೆಚ್ಚು ಕೆಲಸ ಮಾಡಬೇಕು. ಮೊದಲು ನಿಷ್ಠೆ ಮತ್ತು ಜವಾಬ್ದಾರಿ ಇರಬೇಕು’ ಎಂದರು. 
 
‘ಕಾಮನ್‌ ಸೆನ್ಸ್’ ಇರಬೇಕು:  ‘ಕೆರೆಗಳ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಕಲ್ಲು ಅಥವಾ ಟ್ರೆಂಚ್‌ ಹಾಕಿ ಗಡಿ ಗುರುತು ಮಾಡಬೇಕು. ಕೆರೆಯ ಹೂಳನ್ನು ತೆಗೆಸಬೇಕು’ ಎಂದು ಸಚಿವ ದೇಶಪಾಂಡೆ ಸೂಚಿಸಿದರು. 
 
ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರಕಾಶ್‌ ಬನ್ನಿಕೋಡ ಅವರ ಮನವಿಗೆ ಸ್ಪಂದಿಸಿದ ಅವರು,‘ಸ್ವಯಂ ಪ್ರೇರಣೆಯಿಂದ ಅರಣ್ಯದಲ್ಲಿನ ಕೆರೆಗಳ ಹೂಳನ್ನು ತೆಗೆಯುವ ರೈತರಿಗೆ ಅವಕಾಶ ಕಲ್ಪಿಸಿ. ಉಸ್ತುವಾರಿಗೆ ಅಧಿಕಾರಿಯನ್ನು ನಿಯೋಜಿಸಿ. ಅರಣ್ಯ ಸಂಪತ್ತುಗಳನ್ನು ಲೂಟಿ ಹೊಡೆದರೆ ಕ್ರಮಕೈಗೊಳ್ಳಿ’ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. 
 
‘ಕಾನೂನು ಉಲ್ಲಂಘಿಸದಂತೆ ಎಚ್ಚರ ವಹಿಸಿ. ಆದರೆ, ಕಾನೂನು ಹೆಸ ರಲ್ಲಿ ಮಾನವೀಯತೆ ಮರೆಯಬೇಡಿ. ಮೊದಲು ‘ಕಾಮನ್‌ಸೆನ್ಸ್’ ಬೇಕು’ ಎಂದು ಸಚಿವ ದೇಶಪಾಂಡೆ ಅವರು ಚಾಟಿ ಬೀಸಿದರು.
****
ದಾರಿ ತಪ್ಪಿದ ಸಚಿವ
ಜಿಲ್ಲೆಯಲ್ಲಿ ಗುರುವಾರ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ಆರ್.ವಿ. ದೇಶಪಾಂಡೆ, ನಿಗದಿತ ಸ್ಥಳದ ಬದಲಾಗಿ ಬೇರೆಡೆ ತೆರಳಿದ ಘಟನೆ ನಡೆಯಿತು.

ಜಿಲ್ಲಾಡಳಿತ ಸಿದ್ಧ ಪಡಿಸಿದ ಮಾರ್ಗದ ನಕ್ಷೆಯ ಪ್ರಕಾರ, ಸಚಿವರು ತಾಲ್ಲೂಕಿನ ದೇವಿಹೊಸೂರು ಭೇಟಿಯ  ಬಳಿಕ  ಸಂಗೂರು ಬಳಿ ವರದಾ ನದಿ ತೀರಕ್ಕೆ ತೆರಳಬೇಕಿತ್ತು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಅವರಿದ್ದ ಕಾರು ನಿಗದಿತ ಸ್ಥಳಕ್ಕೆ ತೆರಳಿತ್ತು. ಆದರೆ, ಆ ಬಳಿಕ ಬಂದ ಸಚಿವ ಆರ್. ವಿ. ದೇಶಪಾಂಡೆ, ರುದ್ರಪ್ಪ ಲಮಾಣಿ ಹಾಗೂ ಶಾಸಕ ಬಸವರಾಜ ಶಿವಣ್ಣನರು ಇದ್ದ ಕಾರು ಬೆಂಗಾವಲು ವಾಹನದ ಹಿಂದೆಯೇ ಅಲ್ಲಿನ ಹಳ್ಳಿಯ ಮಾರ್ಗದಲ್ಲಿ ಹೋಯಿತು. ಹಳ್ಳಿಯಲ್ಲಿನ ಹೊಲದ ಬಳಿ ಕಾರಿನಿಂದ ಇಳಿದ ಸಚಿವರು ಅತ್ತಿತ್ತ ನೋಡಿದರು.

‘ಇಲ್ಲೇನು ಕೊಳವೆಬಾವಿಯೂ ಕಾಣುತ್ತಿಲ್ಲ. ಮಾಯವಾಯಿತೇ? ಈ ಹೊಲದಲ್ಲಿ ಏನಿದೆ?’ ಎಂದು ಶಾಸಕ ಬಸವರಾಜ ಶಿವಣ್ಣನವರು ಹಿಂಬಾಲಿಸಿಕೊಂಡು ಬಂದ ಇತರ ಅಧಿಕಾರಿಗಳನ್ನು ಪ್ರಶ್ನಿಸಿದರು. ಕೆಲ ಕ್ಷಣಗಳಲ್ಲೇ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌, ಸ್ಥಳ ಅದಲು ಬದಲಾದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.  ಬೆಂಗಾವಲು ವಾಹನ, ನಿಯೋಜಿತ ಪೊಲೀಸರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
****

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.