ADVERTISEMENT

ಕುಟುಂಬದವರಿಗೆ ₨ 2 ಲಕ್ಷ ವಿತರಣೆ

ಆತ್ಮಹತ್ಯೆ ಮಾಡಿಕೊಂಡ ರೈತ ಮಾರುತೆಪ್ಪ ಮಕರಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 10:57 IST
Last Updated 31 ಜುಲೈ 2015, 10:57 IST

ರಟ್ಟೀಹಳ್ಳಿ: ಜೀವನ ಅಮೂಲ್ಯ ವಾದುದು. ಸಾವನ್ನು ಬಯಸದೇ ಆತ್ಮಸ್ಥೈರ್ಯದಿಂದ ಬದುಕಬೇಕು. ಸಮಸ್ಯೆಗಳು ಇದ್ದಂತೆ ಪರಿಹಾರಗಳೂ ಇರುತ್ತವೆ. ಅವುಗಳನ್ನು ಎದುರಿಸುವ ಶಕ್ತಿಯನ್ನು ಗಳಿಸಬೇಕು ಎಂದು ಶಾಸಕ ಯು.ಬಿ.ಬಣಕಾರ ಕಿವಿಮಾತು ಹೇಳಿದರು.

ಇಲ್ಲಿಗೆ ಸಮೀಪದ ಸಣ್ಣಗುಬ್ಬಿ ಗ್ರಾಮದಲ್ಲಿ ಸಾಲಬಾಧೆಯಿಂದ ಮೃತಪಟ್ಟ ರೈತ ಮಾರುತೆಪ್ಪ ಮಕರಿ ಅವರ ಕುಟುಂಬ ವರ್ಗಕ್ಕೆ ಸರ್ಕಾರದ ವತಿಯಿಂದ ₨ 2 ಲಕ್ಷ ಚೆಕ್ ವಿತರಿಸಿ ಅವರು ಮಾತನಾಡಿದರು. ಸಾಲಬಾಧೆ ಮತ್ತು ಬೆಳೆಹಾನಿಯಿಂದ ರೈತ ಸಮೂಹ ಆತ್ಮಹತ್ಯೆಯಂತಹ ದಾರಿ ಹಿಡಿದಿರುವುದು ರಾಜ್ಯದ ಮತ್ತು ರೈತರ ಹಿತದೃಷ್ಠಿಯಿಂದ ಒಳ್ಳೆಯದಲ್ಲ. ಸರ್ಕಾರಗಳು ರೈತಪರ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಜೀವನ ವನ್ನು ರೂಪಿಸಿಕೊಳ್ಳಬೇಕು ಎಂದರು.

ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತವಾಗಿರುತ್ತದೆ. ಅದನ್ನು ನಾವಾಗಿಯೇ ಬಯಸಬಾರದು. ಕಷ್ಟಗಳು ಸಹಜ ಅವುಗಳನ್ನು ಎದುರಿಸಬೇಕು ಸಾವಿಗೆ ಮೊರೆ ಹೋಗಬಾರದು. ಇತರೆ ಕಾಯಕಗಳ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಮೃತ ರೈತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಮಠದ ಪರವಾಗಿ ನೆರವು ನೀಡಲಾಗುವುದು ಎಂದರು. ರೈತರು ಆತ್ಮಹತ್ಯೆ ಮಾರ್ಗ ಹಿಡಿಯದಂತೆ ಅವರಿಗೆ ಧೈರ್ಯ ಕೊಡುವ ಘೋಷವಾಕ್ಯಗಳನ್ನು ಬರೆದು ಅಲ್ಲಲ್ಲಿ ತೂಗು ಹಾಕಿದ್ದು ವಿಶೇಷವಾಗಿತ್ತು.

ಹಾವೇರಿ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಾಲ್ಲೂಕು ಕೃಷಿ ಅಧಿಕಾರಿ ಶಿವಕುಮಾರ ಮಲ್ಲಾಡದ, ಎಸ್.ಎಸ್.ಕಾದ್ರೋಳಿ, ರಟ್ಟೀಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಷ ಹದಡೇರ, ದೇವರಾಜ ಸಣ್ಣಗುಬ್ಬಿ, ಶಂಕರಗೌಡ ಚನ್ನಗೌಡ್ರ, ರವೀಂದ್ರ ಮುದಿಯಪ್ಪನವರ, ಚಂಧ್ರಶೇಖರ ಜಾಡರ, ವೀರನಗೌಡ ಮಕರಿ, ನಾಗರಾಜ ದೇವಣ್ಣನವರ, ಬಸವಣ್ಣೆಪ್ಪ ಎಚ್. ಉಜನೆಪ್ಪ ಬಣಕಾರ, ಎಸ್.ಬಿ.ಪಾಟೀಲ, ರುದ್ರಪ್ಪ ಬೆನ್ನೂರ, ರಾಜು ಪವಾರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.