ADVERTISEMENT

ಕುಡಿತಕ್ಕೆ ಕಡಿವಾಣ ಹಾಕಿದ ‘ಸಬ್‌ಬೀಟ್’ ವ್ಯವಸ್ಥೆ

ಹರ್ಷವರ್ಧನ ಪಿ.ಆರ್.
Published 15 ಮಾರ್ಚ್ 2017, 7:13 IST
Last Updated 15 ಮಾರ್ಚ್ 2017, 7:13 IST

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ತವರಮೆಳ್ಳಿಹಳ್ಳಿಯಲ್ಲಿ ಹಲವಾರು ಮನವಿಗಳು, ದೂರುಗಳು, ಪ್ರತಿಭಟನೆಗಳು, ರಾಷ್ಟ್ರೀಯ ಹೆದ್ದಾರಿ ತಡೆ ಬಳಿಕವೂ ನಿಲ್ಲದ ಮದ್ಯ ಅಕ್ರಮ ಮಾರಾಟಕ್ಕೆ ಪೊಲೀಸ್‌ ‘ಸಬ್‌ ಬೀಟ್‌’ ವ್ಯವಸ್ಥೆ ಕಡಿವಾಣ ಹಾಕಿದೆ.

ಸುಮಾರು ಆರು ಸಾವಿರ ಜನಸಂಖ್ಯೆಯ ಈ ಗ್ರಾಮವು ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿತ್ತು. ಇಲ್ಲಿ ಹಲವು ವರ್ಷಗಳಿಂದ ಅವ್ಯಾಹತವಾಗಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಮಹಿಳೆಯರೇ ಬೀದಿಗಿಳಿದಿದ್ದರೂ, ನಿಯಂತ್ರಣಕ್ಕೆ ಬಂದಿರಲಿಲ್ಲ. ಆದರೆ, ‘ಸಬ್‌ ಬೀಟ್’ನಿಂದ ತಹಬದಿಗೆ ಬಂದಿದೆ.

ಹೀಗಿತ್ತು: ಇಲ್ಲಿನ ಕೆಲವು ಮನೆಗಳಲ್ಲೇ ಮದ್ಯ ಮಾರಾಟ ನಡೆಯುತ್ತಿತ್ತು. ಅಕ್ರಮ ಮಾರಾಟಗಾರರಿಗೆ ಹಾಡಹಗಲೇ ಮದ್ಯ ಸರಬರಾಜು ಆಗುತ್ತಿತ್ತು. ಕೆಲವು ಹೋಟೆಲ್‌, ಢಾಬಾಗಳಲ್ಲೂ ಮದ್ಯ ದೊರೆಯುತ್ತಿತ್ತು. ಇದರಿಂದ ಗ್ರಾಮದ ಮಹಿಳೆಯರು ಹೈರಾಣಾಗಿದ್ದರೆ, ಕೆಲವು ಯುವಕರು ಮದ್ಯದ ದಾಸರಾಗಿದ್ದರು.

ADVERTISEMENT

ಸಬ್‌ಬೀಟ್: ಜಿಲ್ಲೆಯಲ್ಲಿ ‘ಸಬ್ ಬೀಟ್‌’ ಜಾರಿಗೊಂಡ ಬಳಿಕ, ಬಂಕಾಪುರ ಠಾಣೆಯ ಕಾನ್‌ಸ್ಟೆಬಲ್ ಅಲ್ಲಾ ಸಾಹೇಬ್‌ ನದಾಫಗೆ ಇಲ್ಲಿನ ಜವಾಬ್ದಾರಿ ನೀಡಲಾಗಿದೆ. ಆ ಬಳಿಕ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಇಲ್ಲಿನ ಮಹಿಳೆಯರು, ವಿದ್ಯಾರ್ಥಿಗಳು, ಯುವಜನತೆ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಾಟ್ಸ್‌ಪ್‌: ಗ್ರಾಮಸ್ಥರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿದ ನದಾಫ, ‘ತವರಮೆಳ್ಳಿಹಳ್ಳಿ ಸಮಸ್ಯೆಗಳು’ ಎಂಬ ವಾಟ್ಸಪ್ ಗ್ರೂಪ್ ರಚಿಸಿಕೊಂಡರು. ಬಳಿಕ ಆಯ್ದ ಯುವಕರನ್ನು ಗ್ರೂಪ್‌ಗೆ ಸೇರಿಸಿಕೊಂಡರು. ಅವರ ಮೂಲಕ ಮದ್ಯ ಅಕ್ರಮ ಮಾರಾಟ, ಸರಬರಾಜಿನ ಬಗ್ಗೆ ಮಾಹಿತಿ ಪಡೆದರು. ಉಳಿದವರು ಎಸ್ಸೆಮ್ಮೆಸ್‌ ಮಾಡುತ್ತಿದ್ದರು. ಪ್ರತಿನಿತ್ಯ ಹಳ್ಳಿಗೆ ಭೇಟಿ ನೀಡುತ್ತಿದ್ದ ನದಾಫ, ಮೊಬೈಲ್‌ಗೆ ಬಂದ ಮಾಹಿತಿ ಆಧಾರದಲ್ಲಿ ದಾಳಿ ನಡೆಸುತ್ತಿದ್ದರು. ಆಮಿಷ ನೀಡಲು ಬಂದವರಿಗೂ ದಂಡ ಹಾಕಿದ್ದರು. ಈ ಕಾರ್ಯಕ್ಕೆ ಸಬ್‌ ಇನ್‌ಸ್ಪೆಕ್ಟರ್ ಸಿದ್ಧಾರೂಢ ಬಡಿಗೇರ ಬೆಂಗಾವಲಾಗಿ ನಿಂತರು. ಮದ್ಯ ಸರಬರಾಜುದಾರರಿಗೂ ಎಚ್ಚರಿಕೆ ರವಾನಿಸಿದರು.

ಇತರೆಡೆ ಹೋಗಿ ಕುಡಿದು ವಾಹನ ದಲ್ಲಿ ಬರುವವರ ವಿರುದ್ಧ ನಿರಂತರ ‘ಡ್ರಿಂಕ್ ಆ್ಯಂಡ್ ಡ್ರೈವ್’ ಕೇಸು ಹಾಕಿದರು. ಮದ್ಯ ಅಕ್ರಮ ಮಾರಾಟ ನಿಯಂತ್ರಣಕ್ಕೆ ಬಂತು. ಅಲ್ಲಾ ಸಾಹೇಬ್ ನದಾಫ ಮನೆ ಮಾತಾದರು.

ನನ್ನ ಕುಡಿತಕ್ಕೂ ಕಡಿವಾಣ: ‘ನಮ್ಮ ಓಣಿಯಲ್ಲೇ ಮದ್ಯ ಮಾರಾಟ ಮಾಡುತ್ತಿದ್ದರು. ದರ ₹25 ಹೆಚ್ಚಾಗಿದ್ದರೂ, ಸಾಲ ನೀಡುತ್ತಿದ್ದರು. ಹೀಗಾಗಿ ಆಗಾಗ್ಗೆ ಹೋಗಿ ಚಟಕ್ಕೆ ಬಿದ್ದೆನು. ಬೆಳೆ ಮಾರಿದ ಬಳಿಕ ಸಾಲ ನೀಡುತ್ತಿದ್ದೆನು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರೊಬ್ಬರು ತಿಳಿಸಿದರು.

‘ಈಗ ಮದ್ಯ ಸೇವಿಸಲು ಬಂಕಾಪುರ, ಹುರುಳಿಕೊಪ್ಪಿ ಅಥವಾ ಹಾವೇರಿಗೆ ಹೋಗಬೇಕು. ₹200ಕ್ಕೂ ಹೆಚ್ಚು ಖರ್ಚಾಗುತ್ತದೆ. ಅಲ್ಲಿ ಸಾಲ ಇಲ್ಲ. ಕುಡಿತ ತನ್ನಿಂದ
ತಾನೇ ದೂರವಾಯಿತು’ ಎಂದು ವಿವರಿಸಿದರು.

‘ಈ ದಂಧೆ ನಡೆಸುತ್ತಿದ್ದವರೊಬ್ಬರು ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿದ್ದರು. ಈಗ ಚಹಾದಂಗಡಿ ಹಾಕಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ’ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದರು.

‘ಈ ಹಿಂದೆ ಪೊಲೀಸರೆಂದರೆ ಜನರಿಗೆ ಗಾಬರಿಯಿತ್ತು. ಈಗ ಜನರೇ ಪೊಲೀಸರನ್ನು ಸಂಪರ್ಕಿಸುತ್ತಾರೆ. ಹೀಗಾಗಿ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ’ ಎಂದು ಗ್ರಾಮದ ಶಿವಾನಂದ, ಬಿ.ಜಿ. ಪಾಟೀಲ, ಮಹಾಂತೇಶ ರೊಟ್ಟಿಗವಾಡ ವಿವರಿಸಿದರು. 

‘ಪಕ್ಕದ ಮನೆಯಲ್ಲಿಯೇ ಮದ್ಯ ಮಾರಾಟವು ಯುವಕರ ಚಿತ್ತವನ್ನು ಸೆಳೆಯುತ್ತಿತ್ತು. ಈಗ ಅಂತಹ ವಾತಾವರಣವೇ ಇಲ್ಲ’ ಎನ್ನುತ್ತಾರೆ ಹಿರಿಯರಾದ ಚಮನ್ ಸಾಹೇಬ್‌, ಮಲ್ಲಪ್ಪ ಯಲ್ಲಪ್ಪ ನಿಂಬಕ್ಕನವರ ಮತ್ತಿತರರು.

‘ಮಹಿಳೆಯರೆಲ್ಲ ಈಗ ನಿಟ್ಟುಸಿರುವ ಬಿಡುತ್ತಿದ್ದಾರೆ. ಇದಕ್ಕೆ ಪೊಲೀಸರ ಬದ್ಧತೆಯೂ ಕಾರಣ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಜಾ ಎಂ. ನಿಂಬಕ್ಕನವರ.
‘ಸಬ್ ಬೀಟ್’ಗೆ ಬರುವ ಪೊಲೀಸರಿಗಾಗಿ ಕಡೇಹಳ್ಳಿ ಮತ್ತಿತರೆಡೆಗಳಲ್ಲಿ ಗ್ರಾಮದ ಜನತೆಯೇ ಕಚೇರಿ ನೀಡಿದ್ದು, ಉತ್ತಮ ಬೆಂಬಲ ದೊರೆಯುತ್ತಿದೆ’ ಎನ್ನುತ್ತಾರೆ ಸರ್ಕಲ್‌ ಇನ್‌ಸ್ಪೆಕ್ಟರ್ ಸಂತೋಷ ಪವಾರ.

‘ಬಹುತೇಕ ಸಣ್ಣಪುಟ್ಟ ವಿಚಾರಗಳು ಗ್ರಾಮ ಹಂತದಲ್ಲೇ ಬಗೆಹರಿಯುವ ಕಾರಣ ದೊಡ್ಡ ಗೊಂದಲಗಳು ಸೃಷ್ಟಿಯಾಗುತ್ತಿಲ್ಲ’ ಎನ್ನುತ್ತಾರೆ ಸಬ್‌ ಇನ್‌ಪೆಕ್ಟರ್ ಸಿದ್ಧಾರೂಢ ಬಡಿಗೇರ.

**

ಏನಿದು ಸಬ್‌ಬೀಟ್‌...

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಫೆಬ್ರುವರಿ 15ರಿಂದ ‘ಸಬ್‌ ಬೀಟ್‌’ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲೇ ಬೆಳಗಾವಿಯಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದಿದ್ದು, ಕೆಲವು ಆಧುನೀಕರಣದ ಜೊತೆ  ಜಿಲ್ಲೆಯಲ್ಲಿ ಜಾರಿಗೊಂಡಿದೆ. 

ಪೊಲೀಸ್‌ ಇಲಾಖೆಯಲ್ಲಿ ನಿರ್ದಿಷ್ಟ ‘ಬೀಟ್‌’ (ಕರ್ತವ್ಯಕ್ಕೆ)ಗೆ ಪ್ರತಿನಿತ್ಯ ಒಬ್ಬರು ಪೊಲೀಸರನ್ನು ಹಾಕುತ್ತಾರೆ. ಆದರೆ, ಇಲ್ಲಿ ಒಬ್ಬರು ಪೊಲೀಸರಿಗೆ ಕಾಯಂ ಆಗಿ ಒಂದು ಹಳ್ಳಿಯ ಜವಾಬ್ದಾರಿ (ಬೀಟ್) ನೀಡುತ್ತಾರೆ. ಹೀಗಾಗಿ ಅವರ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಹೆಚ್ಚಿದೆ.

ಬದಲಾದ ವ್ಯಾಪ್ತಿ: ಮತ್ತೆ ಆತಂಕ!
ಕಂದಾಯ ಹಾಗೂ ಕೋರ್ಟ್‌ ವ್ಯಾಪ್ತಿಯ ಕಾರಣಗಳಿಗಾಗಿ ಸರ್ಕಾರವು ಸವಣೂರು ತಾಲ್ಲೂಕಿಗೆ ಸೇರಿದ್ದ ತವರಮೆಳ್ಳಿಹಳ್ಳಿ, ಫಕೀರನಂದಿಹಳ್ಳಿ ಹಾಗೂ ಕುಣಿಮೆಳ್ಳಿಹಳ್ಳಿ ಗ್ರಾಮಗಳನ್ನು ಸವಣೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರಿಸಿದೆ. ಬಂಕಾಪುರ ಪೊಲೀಸ್‌ ಠಾಣೆಗಿಂತಲೂ ಸವಣೂರು 5 ಕಿ.ಮೀ ದೂರದಲ್ಲಿದೆ. ಅಲ್ಲದೇ, ಪ್ರಸ್ತುತ ‘ಸಬ್‌ಬೀಟ್‌’ನ ಕಾನ್‌ಸ್ಟೆಬಲ್‌ ಬದಲಾಗಲಿದ್ದಾರೆ. ಹೀಗಾಗಿ ಗ್ರಾಮಸ್ಥರಿಗೆ ಮತ್ತೆ ‘ಮದ್ಯ’ದ ಭಯ ಕಾಡುತ್ತಿದೆ.

**

ತಳಮಟ್ಟದಲ್ಲೇ ಸಮಸ್ಯೆಗಳು ಬಗೆಹರಿಯುವ ಕಾರಣ ಜನರಿಂ ದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ
-ವಂಶಿಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.